ಜಿಲ್ಲೆ

ತಲೆನೋವಾದ ನೆರೆ ಜಿಲ್ಲೆಯ ಸೋಂಕಿತರ ಪ್ರಮಾಣ ಹೆಚ್ಚಳ

ಶನಿವಾರಸಂತೆ: ನೆರೆಯ ಹಾಸನ ಜಿಲ್ಲೆಯಲ್ಲಿ ದಿನೇ ದಿನೆ ಕರೊನಾ ಸೋಂಕು ಹೆಚ್ಚಾಗುತ್ತಿರುವುದು ಗಡಿಭಾಗದಲ್ಲಿರುವ ಆಲೂರು ಸಿದ್ದಾಪುರ ಗ್ರಾ.ಪಂ.ಗೆ ತಲೆನೋವಾಗಿ ಪರಿಣಮಿಸಿದೆ.

ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯೊಂದರಲ್ಲೇ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಹೊಂದಿಕೊಂಡಿದೆ. ಗ್ರಾ.ಪಂ. ವ್ಯಾಪ್ತಿಯ 7 ಕಡೆಗಳಲ್ಲಿ ಗ್ರಾಮೀಣ ರಸ್ತೆಗಳು ಹಾಸನ ಜಿಲ್ಲೆಯ ಅರಕಲಗೂಡಿಗೆ ಸಂಪರ್ಕ ಕಲ್ಪಿಸುತ್ತದೆ. ಶೇ.80 ರಷ್ಟು ಹಾಸನ ಭಾಗದ ಜನರು ಆಲೂರು-ಸಿದ್ದಾಪುರ ವ್ಯಾಪ್ತಿಯ ಸಂಪರ್ಕದಲ್ಲಿರುತ್ತಾರೆ.

ಹಾಸನದ ಅರಕಲಗೂಡು, ಕೊಣನೂರು, ಬಸವಪಟ್ಟಣ, ಕೊಂಗಳಲೆ, ಅಬ್ಬೂರು, ಬನ್ನೂರು ಮುಂತಾದ ಕಡೆಗಳಿಂದ ಜನರು ವ್ಯಾಪಾರ ವಹಿವಾಟಿಗೆ ಆಲೂರು ಸಿದ್ದಾಪುರ ವ್ಯಾಪ್ತಿಗೆ ಬರುತ್ತಾರೆ.

ಇದೀಗ ಹಾಸನ ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಲೂರು ಸಿದ್ದಾಪುರ ಗ್ರಾ.ಪಂ. ವತಿಯಿಂದ ಜಿಲ್ಲೆಯ ಗಡಿಭಾಗದ ಎಲ್ಲ ಗ್ರಾಮೀಣ ರಸ್ತೆಗಳಿಗೆ ಮಣ್ಣು ಸುರಿದು ಸಂಪರ್ಕ ಕಡಿತಗೊಳಿಸಿದ್ದಾರೆ. ಹಾಸನ ಭಾಗದ ಜನರೂ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದಿದ್ದರೂ ಮಣ್ಣನ್ನು ಸರಿಸಿ ವಾಹನಗಳಲ್ಲಿ ಆಲೂರು ಸಿದ್ದಾಪುರಕ್ಕೆ ಆಗಮಿಸುತ್ತಿದ್ದಾರೆ.

ಸೋಮವಾರ ಆಲೂರು ಸಿದ್ದಾಪುರ ಗ್ರಾ.ಪಂ. ಅಧಿಕಾರಿಗಳು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಮತ್ತು ಸ್ವಯಂ ಸೇವಕರ ತಂಡ ಆಲೂರು ಸಿದ್ದಾಪುರಕ್ಕೆ ಪಕ್ಕದ ಹಾಸನದ ಅರಕಲಗೂಡು ವ್ಯಾಪ್ತಿಯಿಂದ ಬೈಕ್, ಕಾರು ಮುಂತಾದ ವಾಹನದಲ್ಲಿ ಬರುತ್ತಿದ್ದವರನ್ನು ಅಡ್ಡಹಾಕಿ ಮಾಹಿತಿ ಸಂಗ್ರಹಿಸಿ ವಿಚಾರಣೆ ಮಾಡಿ ಬಿಡಲಾಯಿತು. ಬೈಕ್ ಕಾರಿನಲ್ಲಿ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದವರನ್ನು ಅಡ್ಡ ಹಾಕಿ ಮಾಸ್ಕ್ ಕೊಂಡು ಧರಿಸುವವರಿಗೂ ಬಿಡುತ್ತಿರಲ್ಲಿಲ್ಲ. ಅನಗತ್ಯವಾಗಿ ಆಲೂರು ಸಿದ್ದಾಪುರಕ್ಕೆ ಬಂದ ಬೈಕ್ ಸವಾರರನ್ನು ವಿಚಾರಿಸಿ ವಾಪಸ್ ಕಳಿಸುತ್ತಿದ್ದರು. ಮಾಸ್ಕ್ ಧರಿಸದ ಕೆಲವೊಂದು ಸ್ಥಳೀಯ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಮತ್ತೆ ಇದೆ ರೀತಿ ಮುಂದುವರಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಪೆಟ್ರೋಲ್ ಬಂಕ್, ಕಂಪ್ಯೂಟರ್ ಸೆಂಟರ್, ಹಾರ್ಡ್‌ವೇರ್ ಅಂಗಡಿ, ಮದ್ಯದ ಅಂಗಡಿ ಮುಂತಾದವುಗಳಿಗೆ ಬರುವ ಗ್ರಾಹಕರ ಬಗ್ಗೆ ವಿಚಾರಿಸಿ ವ್ಯವಹಾರ ನಡೆಸುವಂತೆ ಮತ್ತು ಮಾಸ್ಕ್ ಧರಿಸದೆ ಬರುವ ಗ್ರಾಹಕನೊಂದಿಗೆ ವ್ಯವಹಾರ ನಡೆಸದಿರುವಂತೆ ಮಾಲೀಕರಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ತಂಡ ಆಲೂರು ಸಿದ್ದಾಪುರದಲ್ಲಿರುವ ಅಂಗಡಿ ಮುಂಗಟ್ಟು, ಬ್ಯಾಂಕ್, ಸಹಕಾರ ಸಂಸ್ಥೆಗಳಿಗೆ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸುವಂತೆ ಮಾರ್ಗದರ್ಶನ ನೀಡಲಾಯಿತು.

ಪಿಡಿಒ ಪೂರ್ಣಿಮಾ, ಕಾರ್ಯದರ್ಶಿ ಚಂದ್ರೇಗೌಡ, ಕಿರಿಯ ಆರೋಗ್ಯ ಸಹಾಯಕಿ ಇಂದಿರಾ, ಹಿರಿಯ ಆಶಾ ಕಾರ್ಯಕರ್ತೆ ಶುಭಾ ಇದ್ದರು.