ಜಿಲ್ಲೆ

ಒಳಮೀಸಲು ಒಪ್ಪಲು ಖರ್ಗೆ, ಪರಂ ಮೇಲೆ ಹೆಚ್ಚಿದ ಒತ್ತಡ

lakshmihegde

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಮೀಸಲು ವರ್ಗೀಕರಣದ ಕುರಿತು ರಾಜ್ಯ ಸರ್ಕಾರಗಳು ತೀರ್ಮಾನ ಮಾಡಬಹುದೆಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ನೀಡಿದ ವಿಚಾರದಲ್ಲಿ ಕಾಂಗ್ರೆಸ್ ಸ್ಥಿತಿ ಕತ್ತಿಯಲುಗಿನ ಮೇಲಿನ ನಡಿಗೆಯಂತಾಗಿದೆ. ಪಕ್ಷ ಈ ವಿಚಾರದಲ್ಲಿ ಕಳೆದ 10 ದಿನಗಳಿಂದಲೂ ಒಂದು ಹೆಜ್ಜೆ ಹಿಂದೆಸರಿದು ನಿರ್ಲಿಪ್ತವಾಗಿ ಉಳಿದಿದೆ.

ಇದೇ ವೇಳೆ ರಾಜ್ಯದ ಆಡಳಿತ ಪಕ್ಷದಲ್ಲಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒಮ್ಮತ ಮೂಡಿಸುವ ಕೆಲಸ ಭರದಿಂದ ನಡೆದಿದೆ. ಹೀಗಿರುವಾಗ ತಮ್ಮ ಪಕ್ಷದಲ್ಲೂ ಒಂದಾಭಿಪ್ರಾಯ ತರಲು ಕಾಂಗ್ರೆಸ್​ನ ಎಡಗೈ ಸಮುದಾಯದ ನಾಯಕರು ಪ್ರಯತ್ನ ನಡೆಸಿದ್ದಾರೆ. ಇದನ್ನೂ ಓದಿ:  ಈ ಫೋಟೋ ನೋಡಿ ಇದೆನೆಂದು ಹೇಳಬಲ್ಲಿರಾ? ಜಗತ್ತನ್ನೇ ಕಾಡುತ್ತಿರುವ ಮಹಾಮಾರಿಯ ನಿಜರೂಪ ಬಯಲು…!

ಒಳಮೀಸಲು ಅಗತ್ಯತೆ ಪ್ರಸ್ತಾಪಿಸುವ ಸದಾಶಿವ ಆಯೋಗದ ವರದಿ ಜಾರಿಯಿಂದ ತಮ್ಮ ಬೆನ್ನಿಗಿರುವ ಸಮುದಾಯ ಆಕ್ರೋಶಗೊಳ್ಳಬಹುದೆಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ತಣ್ಣಗಿರುವುದು ಗುಟ್ಟಾಗಿ ಉಳಿದ ವಿಚಾರವೇನಲ್ಲ. ಆದರೆ, ಅವರನ್ನು ಒಪ್ಪಿಸಲು ಅವರದೇ ಪಕ್ಷದ ಎಡಗೈ ಸಮುದಾಯದ ಜನಪ್ರತಿನಿಧಿಗಳು ಹರಸಾಹಸ ನಡೆಸಿದ್ದಾರೆ.

ಅಂದಹಾಗೆ ಪಕ್ಷದ ಅಭಿಪ್ರಾಯ ಒಂದೇ ಹೊರಹೊಮ್ಮಬೇಕೆಂದು ಈ ಮುಖಂಡರು ಮಾಡಿದ ಪ್ರಯತ್ನ ಈವರೆಗೆ ಫಲ ನೀಡಿಲ್ಲ. ಹಾಗೆಯೇ ಪ್ರಯತ್ನವನ್ನೂ ಕೈಬಿಟ್ಟಿಲ್ಲ. ಸೋಮವಾರ ಅಥವಾ ಮಂಗಳವಾರ ದೆಹಲಿಯಲ್ಲಿ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಅವರ ಮನವೊಲಿಸಿ ಅವರಿಂದ ಹೇಳಿಕೆ ಕೊಡಿಸಬೇಕೆಂದು ಒಂದು ತಂಡ ಪ್ರಯತ್ನ ನಡೆಸಿದೆ. ಜಿ.ಪರಮೇಶ್ವರ್, ಎಚ್. ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ, ಅವರ ಮೇಲೂ ಒತ್ತಡ ತರಲಾಗಿದೆ.

ಪಕ್ಷಕ್ಕೆ ಇಕ್ಕಟ್ಟು: ಕಾಂಗ್ರೆಸ್ ಮತ ಬ್ಯಾಂಕ್ ಎಂದು ನಂಬಿಕೊಂಡಿರುವ ಸಮುದಾಯಗಳು ತಿರುಗಿ ಬಿದ್ದರೆ ಭವಿಷ್ಯದಲ್ಲಿ ಕಷ್ಟವಾಗಬಹುದು ಎಂಬ ಕಾರಣಕ್ಕೆ ಪಕ್ಷ ಒಂದು ನಿಲುವನ್ನು ಸ್ಪಷ್ಟಪಡಿಸಲು ಹಿಂದೇಟು ಹೊಡೆಯುತ್ತಿದೆ ಎನ್ನಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಈ ವಿಷಯದಲ್ಲಿ ಹೆಚ್ಚೆಚ್ಚು ಆಸಕ್ತಿ ತಾಳುತ್ತಿದೆ. ಒಂದು ವೇಳೆ ಸದಾಶಿವ ಆಯೋಗದ ವರದಿ ಜಾರಿ ಮಾಡಿದ ಕೀರ್ತಿ ತನಗೆ ಸಂದರೆ ಪಕ್ಷಕ್ಕೆ ಭವಿಷ್ಯದಲ್ಲಿ ದೊಡ್ಡ ಲಾಭವಾಗಬಹುದೆಂದೆಣಿಸಿದೆ. ಬಿಜೆಪಿಯ ಈ ಲೆಕ್ಕಾಚಾರ ಅರಿತೇ ಕಾಂಗ್ರೆಸ್ ಸಂಕಟಕ್ಕೆ ಸಿಲುಕಿದೆ. ಇದನ್ನೂ ಓದಿ: ಗಾಲ್ವಾನ್​ ಸಂಘರ್ಷದಲ್ಲಿ ಹತ್ಯೆಯಾದ ಚೀನಾ ಯೋಧರ ಸಂಖ್ಯೆ 60ಕ್ಕೂ ಹೆಚ್ಚು; ಅಮೆರಿಕ ಮೂಲದಿಂದ ಸತ್ಯ ಬಯಲು…!

ಇನ್ನು ಒಳ ಮೀಸಲು ಕುರಿತು ನ್ಯಾಯಾಲಯದ ಅಭಿಪ್ರಾಯದ ಬಗ್ಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಲಿಲ್ಲ. ಈ ಮೂಲಕ ತಮಗೆ ವರದಿ ಜಾರಿಯ ಬಗ್ಗೆ ಸಹಮತ ಇಲ್ಲ ಎಂಬುದನ್ನು ಪರೋಕ್ಷವಾಗಿ ತೋರ್ಪಡಿಸಿಕೊಂಡಿದ್ದಾರೆ. ಇನ್ನು ಭೋವಿ, ಲಂಬಾಣಿ ಸಮುದಾಯದ ನಾಯಕರೂ ಸಹ ಒಳ ಮೀಸಲಾತಿ ಜಾರಿಯಾಗಬೇಕೆಂಬ ಬಗ್ಗೆ ಸಹಮತ ತೋರುತ್ತಿಲ್ಲ.

ಕಾಂಗ್ರೆಸ್​ಗೆ ಅಳುಕೇಕೆ?
  • 1. ಆರಂಭದಿಂದಲೂ ತನ್ನ ಬೆನ್ನಿಗೆ ನಿಂತ ಸಮುದಾಯಕ್ಕೆ ಈ ವಿಚಾರದಲ್ಲಿ ಯಾವುದೇ ನಿಲುವಿಗೆ ಬಂದರೂ ನಷ್ಟ.
  • 2. ಒಳ ಮೀಸಲು ಜಾರಿಯಾಗಬೇಕೆಂದು ಒಳಮನಸ್ಸಿನಲ್ಲಿ ಇದ್ದರೂ ಅದನ್ನು ಬಹಿರಂಗಪಡಿಸಲಾಗದ ಸ್ಥಿತಿ.
  • 3. ಹಿರಿಯ ನಾಯಕರು ಬಹಿರಂಗವಾಗಿ ಹೇಳಿಕೆ ನೀಡದ ಹೊರತು ಪಕ್ಷದ ನಿಲುವು ಪ್ರಕಟಿಸಲು ಸಾಧ್ಯವಾಗದ ಸ್ಥಿತಿ.
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಶ್ರೀನಿವಾಸ ಪ್ರಸಾದ್ ಸೇರಿ ಪ್ರಮುಖರನ್ನು ಭೇಟಿ ಮಾಡಿ ಮನವೊಲಿಸುವ ಕೆಲಸ ಮಾಡುತ್ತೇವೆ. ಬಳಿಕ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ. ಎಲ್ಲರೂ ಸಹಮತ ವ್ಯಕ್ತಪಡಿಸುವ ಆಶಾಭಾವನೆ ಇದೆ. | ಎಲ್.ಹನುಮಂತಯ್ಯ ರಾಜ್ಯಸಭಾ ಸದಸ್ಯ