ಜಿಲ್ಲೆ

ಮೆಕ್ಕೆಜೋಳ ಬೆಳೆಗೆ ಶೀತಬಾಧೆ

Davangere - Desk - Ganesh M K

ಮಾಯಕೊಂಡ: ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮಾಯಕೊಂಡ ಹೋಬಳಿಯ ಹಲವಾರು ಗ್ರಾಮಗಳ ಗದ್ದೆಗಳಲ್ಲಿ ನೀರು ನಿಂತು 15-20 ದಿನಗಳ ಹಿಂದೆ ಬಿತ್ತನೆ ಮಾಡಿರುವ ಮೆಕ್ಕೆಜೋಳ ಸಸಿಗಳು ಶೀತಬಾಧೆಗೆ ಒಳಗಾಗಿವೆ.

ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಅಣಜಿ ಹೋಬಳಿಗಳು ಮೆಕ್ಕೆಜೋಳದ ಕಣಜ ಹಾಗೂ ಅತಿ ಹೆಚ್ಚು ಮಳೆಯಾಶ್ರಿತ ಖುಷ್ಕಿ ಜಮೀನು ಒಳಗೊಂಡ ಪ್ರದೇಶಗಳಾಗಿವೆ.

ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ, ಹೆದ್ನೆ, ಎಚ್. ಬಸವಾಪುರ, ಕ್ಯಾತನಹಳ್ಳಿ, ಹಿಂಡಿಸಕಟ್ಟೆ, ನಲ್ಕುಂದ, ಅಣಬೇರು, ಹುಚ್ಚವ್ವನಹಳ್ಳಿ ಸೇರಿದಂತೆ ಈ ಹೋಬಳಿ ಗ್ರಾಮಗಳಲ್ಲಿ ಮುಂಗಾರು ಸಮಯಕ್ಕೆ ಸರಿಯಾಗಿ ಬಾರದೆ ಮೆಕ್ಕೆಜೋಳ ಬಿತ್ತನೆ ಕಳೆದ 15ರಿಂದ 20 ದಿನಗಳ ಹಿಂದೆ ಆಗಿವೆ.
ಆದರೆ, ವಾರದಿಂದ ಮಳೆ ಸುರಿಯುತ್ತಿರುವುದರಿಂದ ಮೆಕ್ಕೆಜೋಳದ ಸಸಿಗಳಲ್ಲಿ ನೀರು ತುಂಬಿ ಬಿಳಿಚಿಕೊಳ್ಳುತ್ತಿವೆ.

ಈ ಕುರಿತು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರ್‌ಮೂರ್ತಿ ಮಾತನಾಡಿ, ಹೊಲಗಳಲ್ಲಿ ತೇವಾಂಶ ಜಾಸ್ತಿಯಾಗಿ ಸಸಿಗಳಿಗೆ ಶೀತ ಜಾಸ್ತಿಯಾಗಿ ಬಿಳಿಚಿಕೊಳ್ಳುತ್ತಿವೆ. ಆದ್ದರಿಂದ ರೈತರು ಮಳೆ ಕಡಿಮೆಯಾದ ತಕ್ಷಣ ಲಘು ಪೋಷಕಾಂಶಗಳ ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 2 ಮಿಲಿ ಹಾಗೂ ನ್ಯಾನೊ ಯೂರಿಯಾ ಪ್ರತಿ ಲೀಟರ್ ನೀರಿಗೆ 2-4 ಮಿಲಿ ಮಿಶ್ರಣ ಮಾಡಿಕೊಂಡು ಸಿಂಪಡಣೆ ಮಾಡಬೇಕು. ಈ ಕ್ರಮ ಅನುಸರಿಸುವುದರಿಂದ ಮೆಕ್ಕೆಜೋಳ ಬೆಳೆ ಅತಿ ಬೇಗ ಚೇತರಿಸಿಕೊಳ್ಳುತ್ತದೆಎಂದು ಸಲಹೆ ನೀಡಿದ್ದಾರೆ.