ಜಿಲ್ಲೆ

ಕೆಜಿಎಫ್​ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಲಾಬಿ

KGF Nagarasabhe Precident and Vice Precident Election KGF

ಖಾಸಗಿ ಹೋಟೆಲ್​ನಲ್ಲಿ ಸ್ವಾಭಿಮಾನ ಬಣದ ಗುಪ್ತ ಸಭೆ - ಅಧಿಕಾರ ಹಿಡಿಯಲು ಬೇಕಿದೆ 18 ಸದಸ್ಯರ ಬೆಂಬಲ



ಕೆಜಿಎಫ್​: ಕೆಜಿಎಫ್​- ನಗರಸಭೆ ಅಧ್ಯಕ್ಷಗಾದಿಗೆ ಪೈಪೋಟಿ ಹೆಚ್ಚಾಗಿದ್ದು, ಆಕಾಂತರು ಆಡಳಿತ ಚುಕ್ಕಾಣಿ ಹಿಡಿಯಲು ತೆರೆಮರೆಯಲ್ಲಿ ಕಸರತ್ತು ಶುರುವಿಟ್ಟುಕೊಂಡಿದ್ದಾರೆ.
ನಗರಸಭೆಯ 35 ಸದಸ್ಯರ ಪೈಕಿ 14 ಕಾಂಗ್ರೆಸ್​, 3 ಬಿಜೆಪಿ, 2 ಜೆಡಿಎಸ್​, 1 ಸಿಪಿಎಂ ಮತ್ತು 15 ಪಕ್ಷೇತರ ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ 18 ಸದಸ್ಯರ ಬೆಂಬಲ ಅಗತ್ಯವಿದೆ. ಈ ಬಾರಿಯ ಅಧ್ಯಕ್ಷ&ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷೇತರರ ಬೆಂಬಲವೇ ನಿರ್ಣಾಯಕವಾಗಲಿದೆ.
ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ 2ನೇ ವಾರ್ಡ್​ ಸದಸ್ಯ ವಳ್ಳಲ್​ ಮುನಿಸ್ವಾಮಿ, ಸದಸ್ಯರಾದ ಕರುಣಾಕರನ್​, ಸೆಂದಿಲ್​ ಮೂವರು ಸ್ವಾಭಿಮಾನಿ ಬಣದ ಮುಖಂಡ ವಿ.ಮೋಹನ್​ ಕೃಷ್ಣ ಅವರನ್ನು ಇತ್ತೀಚೆಗೆ ಖಾಸಗಿ ಹೋಟೆಲೊಂದರಲ್ಲಿ ಭೇಟಿಯಾಗಿ ಚರ್ಚಿಸುತ್ತಿರುವ ೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಚಲನ ಸೃಷ್ಟಿಸಿದೆ.
ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ವರ್ಗಗಳಿಗೆ ನಿಗದಿಯಾಗಿದ್ದು, ಕಾಂಗ್ರೆಸ್​ನಿಂದ ಗೆದ್ದು ಮೊದಲ ಅವಧಿಯಲ್ಲಿ ಅಧಿಕಾರ ನಿರ್ವಹಿಸಿದ್ದ ಕಾಂಗ್ರೆಸ್​ ಕಟ್ಟಾಳು, ಶಾಸಕಿ ರೂಪಕಲಾ ಅವರ ಆಪ್ತ ವಲಯದಲ್ಲಿ ಗರುತಿಸಿಕೊಂಡಿದ್ದ ವಳ್ಳಲ್​ ಮುನಿಸ್ವಾಮಿ ಪತ್ನಿ, 5ನೇ ವಾರ್ಡ್​ ಸದಸ್ಯೆ ಶಾಂತಿ ವಳ್ಳಲ್​ ಮುನಿಸ್ವಾಮಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಮಾತುಕತೆ ನಡೆಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
35 ಸದಸ್ಯರ ಪೈಕಿ 15 ಪಕ್ಷೇತರರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್​ ಒಟ್ಟು 5 ಸದಸ್ಯರು ಸೇರಿ ಒಟ್ಟು 20 ಮಂದಿ ಸದಸ್ಯರಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷೇತರರು ಮತ್ತು ಬಿಜೆಪಿ, ಜೆಡಿಎಸ್​ ಸದಸ್ಯರೊಂದಿಗೆ ವಳ್ಳಲ್​ ಮುನಿಸ್ವಾಮಿ ಹಾಗೂ ಅವರ ಪತ್ನಿ ಶಾಂತಿ ವಳ್ಳಲ್​ ಮುನಿಸ್ವಾಮಿ ಸೇರಿ ಒಟ್ಟು 22 ಮಂದಿ ಸದಸ್ಯರ ಬಲವಿದ್ದು, ತಮಗೆ ಬೆಂಬಲ ನೀಡುವಂತೆ ಮೋಹನ್​ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಶಾಸಕಿ ಎಂ.ರೂಪಕಲಾ ಅವರೂ ವಳ್ಳಲ್​ ಮುನಿಸ್ವಾಮಿ ಸೇರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿತ ಸದಸ್ಯರನ್ನು ಗೃಹ ಕಚೇರಿಗೆ ಕರೆಸಿ ಮಾತುಕತೆ ನಡೆಸಿದ್ದು, ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಭೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
22ಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಕೆಜಿಎಫ್​-: ನಗರಸಭೆ, ಪುರಸಭೆಗಳ ಅಧ್ಯಕ್ಷ&ಉಪಾಧ್ಯಕ್ಷ ಚುನಾವಣೆ ನಡೆಸುವ ಸಲುವಾಗಿ ಆ.5 ರಂದು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಆ.22ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುವ ಸಲುವಾಗಿ ದಿನಾಂಕ ನಿಗದಿಗೊಳಿಸಿ, ನಗರಸಭೆಯ ಎಲ್ಲ ಸದಸ್ಯರಿಗೆ ಸಭೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಆ.22ರಂದು ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ನಾಮ ನಿರ್ದೇಶನ ಸ್ವೀಕೃತಿಗೆ ಸಮಯ ಮೀಸಲುಗೊಳಿಸಲಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ, ಅವಶ್ಯವಿದ್ದಲ್ಲಿ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬಂಡಾಯದ ಬಿಸಿ?
ಇನ್ನು ಕೆಲವು ಸದಸ್ಯರು ಶಾಸಕಿ ಎಂ.ರೂಪಕಲಾ ಅವರು ಸೂಚಿಸುವವರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರೂ, ಕೊನೇ ಕ್ಷಣದಲ್ಲಿ ನಮ್ಮನ್ನು ಚುನಾವಣೆಗಷ್ಟೇ ಬಳಸಿಕೊಳ್ಳುತ್ತಾರೆ ಎನ್ನುವ ಮಾತುಗಳೂ ಸದಸ್ಯರ ನಡುವೆ ಕೇಳಿಬರುತ್ತಿದ್ದು, ಕಾಂಗ್ರೆಸ್​ ಸದಸ್ಯರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಚುನಾವಣೆಯಲ್ಲಿ ಬಂಡಾಯವೆದ್ದರೆ ಆ ಸದಸ್ಯರ ಬೆಂಬಲ ಯಾರ ಕಡೆ ತಿರುಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ
ರೇಸ್​ನಲ್ಲಿ ಸುಕನ್ಯಾ ಸುರೇಶ್​
ಪಕ್ಷೇತರ ಸದಸ್ಯೆ ಸುಕನ್ಯಾ ಸುರೇಶ್​ ಕೂಡ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿದ್ದು, ಕಾಂಗ್ರೆಸ್​ ಸದಸ್ಯರನ್ನು ಹೊರತುಪಡಿಸಿ ಬಿಜೆಪಿ ಮತ್ತು ಜೆಡಿಎಸ್​ ಸದಸ್ಯರ ಬೆಂಬಲ ಪಡೆದುಕೊಂಡಲ್ಲಿ ಜಯಗಳಿಸುವುದು ಸುಲಭವಾಗಲಿದೆ ಎನ್ನಲಾಗಿದೆ.
ಶಾಂತಿ ವಳ್ಳಲ್​ ಮುನಿಸ್ವಾಮಿ, ಶಾಲಿನಿ ನಂದಕುಮಾರ್​, ಇಂದಿರಾಗಾಂಧಿ ದಯಾಶಂಕರ್​, ಶಾಂತಿ ಅನ್ಬು ಅವರು ಅಧ್ಯಕ್ಷ ಸ್ಥಾನದ ರೇಸ್​ನಲ್ಲಿರುವ ಕಾಂಗ್ರೆಸ್​ ಸದಸ್ಯರಾಗಿದ್ದು, ಇವರಲ್ಲಿ ಶಾಸಕಿ ಎಂ.ರೂಪಕಲಾ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.


ವಳ್ಳಲ್​ ಮುನಿಸ್ವಾಮಿ ನಮ್ಮನ್ನು ಸಂಪರ್ಕಿಸಿ ನಿಮ್ಮೊಂದಿಗೆ ಇರುವುದಾಗಿ ಮಾತು ಕೊಟ್ಟಿದ್ದಾರೆ. ಅಂತೆಯೇ, 16 ಮಂದಿ ನಗರಸಭೆ ಸದಸ್ಯರು ನಮ್ಮೊಂದಿಗೆ ಇರುವುದಾಗಿ ತಿಳಿಸಿ ಸಹಾಯ ಮಾಡುವಂತೆ ಕೋರಿದ್ದಾರೆ. ಅಲ್ಲದೇ 22 ನಗರಸಭೆ ಸದಸ್ಯರು ಸಂಪರ್ಕದಲ್ಲಿದ್ದು, ನೀವು ಯಾರಿಗೆ ಬೆಂಬಲ ಸೂಚಿಸುವಂತೆ ತಿಳಿಸಿದರೆ ಅವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ. ಮಾಜಿ ಶಾಸಕ ಎಂ.ಭಕ್ತವತ್ಸಲಂ ಅವರು ಅಧಿಕಾರದಲ್ಲಿದ್ದಾಗ ಸ್ಥಳಿಯವಾಗಿ ಹುಟ್ಟಿ ಬೆಳೆದವರು ಸಿಎಂಸಿ ಅಧ್ಯಕ್ಷ ಸ್ಥಾನವನ್ನು ಹಿಡಿಯಬೇಕೆಂದು ಬಯಸಿದಂತೆ ಈ ಬಾರಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿರುವುದು ನೂರಕ್ಕೆ ನೂರರಷ್ಟು ಸತ್ಯ.

ವಿ.ಮೋಹನ್​ ಕೃಷ್ಣ ಸ್ವಾಭಿಮಾನಿ ಬಣದ ಮುಖಂಡ