ಜಿಲ್ಲೆ

ಬೆಳೆದ ಬೆಳೆ ಸ್ವಯಂ ಮಾರಾಟದಿಂದ ಆದಾಯ ವೃದ್ಧಿ: ಡಾ. ವಿಜಯ ಸಂಕೇಶ್ವರ ಪ್ರತಿಪಾದನೆ

ಬೆಂಗಳೂರು: ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಸ್ವಯಂ ಮಾರಾಟ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಪ್ರತಿಪಾದಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ವಿವಿಯ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಎಟಿಐಸಿ) ಮತ್ತು ಖುಷ್ಕಿ ಬೇಸಾಯ ಪ್ರಾಯೋಜನೆ ವಿಭಾಗವು ‘ವಿಜಯವಾಣಿ’ ಪತ್ರಿಕೆಯ ಪ್ರಶ್ನೋತ್ತರ ಅಂಕಣ ‘ರೈತ ಮಿತ್ರ’ 3ನೇ ವಾರ್ಷಿಕೋತ್ಸವ ಹಾಗೂ ‘ಕ್ಯಾಚ್ ದಿ ರೈನ್’ ಕಾರ್ಯಾಗಾರ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಕೆಲ ರೈತರು ತಾವು ಬೆಳೆದ ಬೆಳೆಯನ್ನು ತಾವೇ ಮಾರಾಟ ಮಾಡಲು ಹಿಂಜರಿಯುತ್ತಾರೆ. ಇನ್ನೂ ಕೆಲವರು ನಾಚಿಕೆಪಡುತ್ತಾರೆ. ಆದರೆ, ಯಾವ ರೈತ ತಾನು ಬೆಳೆದ ಉತ್ಪನ್ನವನ್ನು ಸ್ವಯಂ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಾನೋ ಅಂತಹ ಕೃಷಿಕನು 2-3 ಪಟ್ಟು ಆದಾಯ ಪಡೆಯುತ್ತಾನೆ. ಒಮ್ಮೆ ಮುಧೋಳ ಪ್ರವಾಸದಲ್ಲಿದ್ದಾಗ ದ್ರಾಕ್ಷಿ ತೋಟ ಹೊಂದಿದ್ದ ಶಿಕ್ಷಕರು ತಮ್ಮ ಉತ್ಪನ್ನವನ್ನು ರಸ್ತೆಬದಿ ನಿಂತು ಮಾರುತ್ತಿದ್ದನ್ನು ಕಂಡು ಅಚ್ಚರಿಗೆ ಒಳಗಾದೆ. ಈ ಬಗ್ಗೆ ವಿಚಾರಿಸಿದಾಗ ತೋಟದಲ್ಲೇ ದ್ರಾಕ್ಷಿ ಮಾರಾಟ ಮಾಡಿದರೆ 2 ಲಕ್ಷ ರೂ. ಸಿಗುತ್ತದೆ. ಆದರೆ, 15 ದಿನ ರಸ್ತೆಬದಿ ನಿಂತು ಮಾರಿದರೆ 8 ಲಕ್ಷ ರೂ. ಸಿಗುತ್ತದೆ ಎಂದರು. ಆದಾಯ ವೃದ್ಧಿಗೆ ಇರುವ ದಾರಿಗಳನ್ನು ಕಂಡುಕೊಂಡಲ್ಲಿ ರೈತರಿಗೆ ಹೆಚ್ಚಿನ ಲಾಭ ಸಿಗುವುದು ನಿಶ್ಚಿತ ಎಂದು ಡಾ. ವಿಜಯ ಸಂಕೇಶ್ವರ ತಿಳಿಸಿದರು.

ಶ್ರದ್ಧೆಯ ದುಡಿಮೆಗೆ ಫಲ ಉಂಟು:

ಪ್ರಸ್ತುತ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ. ಕೆಲವರು ಬೆಳೆ ನಷ್ಟಕ್ಕೊಳಗಾಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರೈತರಿಗಿಂತ ಹೆಚ್ಚು ಸಮಸ್ಯೆಯನ್ನು ಸಾರಿಗೆ ಕ್ಷೇತ್ರದವರು ಎದುರಿಸುತ್ತಿದ್ದು 1,000ಕ್ಕೆ ಒಬ್ಬರು ಮಾತ್ರ ಲಾಭ ಕಾಣುತ್ತಿದ್ದರೂ, ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಕೆಲ ಕೃಷಿಕರ ಮಕ್ಕಳು ವ್ಯವಸಾಯದಿಂದ ವಿಮುಖರಾಗುತ್ತಿದ್ದರೆ, ಇನ್ನೊಂದೆಡೆ ಸ್‌ಟಾವೇರ್ ಕ್ಷೇತ್ರದಲ್ಲಿರುವವರು ಉದ್ಯೋಗಕ್ಕೆ ರಾಜೀನಾಮೆ ನೀಡಿ ಖುಷಿಯಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ರೈತರು ಶ್ರದ್ಧೆ ಹಾಗೂ ಸೇವಾ ತತ್ಪರತೆ ಅನುಸರಿಸಿದರೆ ಭೂಮಿ ತಾಯಿ ಕೈಬಿಡುವುದಿಲ್ಲ. ರೈತರು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ರ್ತು ಮಾಡುವಂತಹ ಎತ್ತರಕ್ಕೆ ಬೆಳೆಯಬೇಕು. ಭಾರತೀಯ ಪದ್ಧತಿಯಾದ ಸಾವಯವ ಕೃಷಿಯನ್ನು ಅವಲಂಬಿಸುವುದು ಉತ್ತಮ ಎಂದು ಡಾ. ವಿಜಯ ಸಂಕೇಶ್ವರ ವಿವರಿಸಿದರು.

ತಜ್ಞರಿಂದ ಜಾಗೃತಿ ಕಾರ್ಯ:

ಸಭಾ ಕಾರ್ಯಕ್ರಮದ ಬಳಿಕ ರೈತರಿಗೆ ಖುಷ್ಕಿ ಬೇಸಾಯದಲ್ಲಿ ಮಳೆನೀರು ಕೊಯ್ಲು ಪ್ರಾಮುಖ್ಯತೆ ಕುರಿತು ಪ್ರಾಯೋಜನೆಯ ವಿಜ್ಞಾನಿ ಡಾ. ಮೂಡಲಗಿರಿಯಪ್ಪ ಮಾಹಿತಿ ಒದಗಿಸಿದರು. ಹೊರ ಹರಿಯುವ ಮಳೆನೀರು ಕೊಯ್ಲು ತಾಂತ್ರಿಕತೆ ಬಗ್ಗೆ ಹಿರಿಯ ವಿಜ್ಞಾನಿ ಡಾ. ಕೆ.ದೇವರಾಜ ಹಾಗೂ ಅಂತರ್ಜಲ ಮತ್ತು ಮಳೆಕೊಯ್ಲು ಬಗ್ಗೆ ತಜ್ಞ ಡಾ. ಎನ್.ಜೆ.ದೇವರಾಜ ರೆಡ್ಡಿ ಕೃಷಿಕರಿಗೆ ಅರಿವು ಮೂಡಿಸಿದರು.

ಇದೇ ವೇಳೆ ಕೆಂಗೇರಿಯ ಸುಸ್ಥಿರ ಪ್ರತಿಷ್ಠಾನ ತಂಡದ ಸದಸ್ಯರು ಮಳೆಕೊಯ್ಲು ಕುರಿತು ಕಿರು ನಾಟವನ್ನು ಅಭಿನಯಿಸಿದರು.ಸಮಾರಂಭದಲ್ಲಿ ಕೃಷಿ ವಿವಿ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ಎಟಿಐಸಿ ಮುಖ್ಯಸ್ಥ ಡಾ. ಕೆ.ಪಿ.ರಘುಪ್ರಸಾದ್, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಡೆಪ್ಯೂಟಿ ಎಡಿಟರ್ ರಾಘವೇಂದ್ರಗಣಪತಿ ಹಾಜರಿದ್ದರು.

ವೈಜ್ಞಾನಿಕ ಕೃಷಿ ಕಾರ್ಯಕ್ರಮಕ್ಕೆ ಸಲಹೆ:

ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಮಾತನಾಡಿ, ಸದ್ಯ ಕೃಷಿ ಕ್ಷೇತ್ರದಲ್ಲಿ ವಿವಿ ಕೈಗೆತ್ತಿಕೊಳ್ಳುವ ಕಾರ್ಯಕ್ಕೆ ಸವಾಲು ಹಾಗೂ ಜವಾಬ್ದಾರಿ ಹೆಚ್ಚಿದೆ. ರೈತರಿಗಾಗಿ ವಿಜಯವಾಣಿ ಜತೆಗೂಡಿ ರೈತರ ಕುಂದು-ಕೊರತೆ ನಿವಾರಿಸಲು ಕೃಷಿ ಸಂಬಂಧಿತ ಪ್ರಶ್ನೆ ಮಾಲಿಕೆ ಆರಂಭಿಸಿ ಯಶಸ್ಸಿ 3 ವರ್ಷ ಪೂರ್ಣಗೊಳಿಸಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ವಿವಿಗೆ ಬರುತ್ತಿರುವ ದೂರವಾಣಿ ಕರೆಗಳ ಸಂಖ್ಯೆ 3 ಪಟ್ಟು ಹೆಚ್ಚಿದೆ. ಮುಂದಿನ ದಿನಗಳಲ್ಲಿ ವಿಜಯವಾಣಿ ಪತ್ರಿಕೆಯು ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಅದಕ್ಕೆ ವಿವಿಯು ತಾಂತ್ರಿಕ ಹಾಗೂ ಇತರ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಗುಟ್ಕಾ ಬ್ಯಾನ್ ಮಾಡಲಿ:

ದೇಶದ ಶಕ್ತಿಯಾಗಿರುವ ಯುವಜನತೆಗೆ ಮಾರಕವಾಗಿರುವ ಗುಟ್ಕಾ ಸೇವನೆಯಿಂದ ದೊಡ್ಡ ಸಂಖ್ಯೆಯ ಯುವಕರು ಸಾವಿಗೀಡಾಗುತ್ತಿದ್ದಾರೆ. ಇವರಲ್ಲಿ ರೈತರ ಮಕ್ಕಳೂ ಸೇರಿದ್ದಾರೆ. ಇದನ್ನು ಮನಗಂಡೇ ದೇಶದ 20 ರಾಜ್ಯಗಳು ಈಗಾಗಲೇ ಗುಟ್ಕಾ ಬ್ಯಾನ್ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ಬೇರೆ ಕಾರಣ ನೀಡಿ ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿಲ್ಲ. ಇದರಿಂದ ಯಾರಿಗೂ ನಷ್ಟವಿಲ್ಲ. ಮ್ಯಾನ್‌ಮಾರ್‌ನಿಂದ ದೇಶಕ್ಕೆ ಬರುವ ಅಡಕೆ ಬಂದ್ ಮಾಡಿದರೆ ಸ್ಥಳೀಯ ಅಡಕೆಗೆ ಹೆಚ್ಚಿನ ಬೆಲೆ ಸಿಗುತ್ತದೆ. ಕೆಟ್ಟ ರಾಜಕಾರಣದಿಂದ ನಾವು ಪಾಪದ ಕೆಲಸ ಮಾಡಬಾರದು. ಇದನ್ನು ಗಮನಿಸಿಯಾದರೂ ಸರ್ಕಾರ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡುವ ನಿರ್ಧಾರ ಕೈಗೊಳ್ಳಲಿ ಎಂದು ಡಾ. ವಿಜಯ ಸಂಕೇಶ್ವರ ಒತ್ತಾಯಿಸಿದರು.

ಮಾದರಿ ಕೃಷಿಕನಾಗುವ ಹೆಬ್ಬಯಕೆ:

ನಾವು ಸಾರಿಗೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ, ಕೃಷಿ ಬಗ್ಗೆ ಒಲವು ಹೊಂದಿದ್ದೇವೆ. ಆದರೆ, ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಜಮೀನು ಖರೀದಿಸಲು ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಲು ಅವಕಾಶ ಮಾಡಿಕೊಟ್ಟ ಬಳಿಕ ನಮಗೂ ಕೃಷಿ ಮಾಡಬೇಕೆಂಬ ಹೆಬ್ಬಯಕೆ ಮೂಡಿದೆ. ಭವಿಷ್ಯದಲ್ಲಿ ಜಮೀನು ಖರೀದಿಸಿ ಸಾವಯವ ಕೃಷಿ ಮಾಡಿ ಇತರರಿಗೆ ಮಾದರಿಯಾಗುವ ಇಚ್ಛೆ ಇದೆ ಎಂದು ಡಾ. ವಿಜಯ ಸಂಕೇಶ್ವರ ತಿಳಿಸಿದರು.

ಕೃಷಿಯಲ್ಲಿ ದಲ್ಲಾಳಿ ಪದ್ಧತಿಯನ್ನು ಹೋಗಲಾಡಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತಸ್ನೇಹಿಯಾದ ಕೆಲ ಕಾನೂನುಗಳನ್ನು ಜಾರಿಗೆ ತಂದರು. ಆದರೆ, ಈ ನಿರ್ಧಾರಕ್ಕೆ ಕೆಲ ರಾಜಕಾರಣಿಗಳು, ದಲ್ಲಾಳಿಗಳು ವಿರೋಧ ವ್ಯಕ್ತಪಡಿಸಿದರು. ರೈತರ ಹೋರಾಟದ ಹಿಂದೆಯೂ ವಿದೇಶಿ ಕೈವಾಡವೂ ಇತ್ತು. ಇದಕ್ಕೆ ವಿದೇಶದಿಂದ ಹಣ ಕೂಡ ಬರುತ್ತದೆ. ಈ ಬಗ್ಗೆ ರೈತರು ಎಚ್ಚರ ವಹಿಸಬೇಕಿದೆ.

- ಡಾ. ವಿಜಯ ಸಂಕೇಶ್ವರ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್