ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಕೆರೆ ನೀರಿಲ್ಲದೆ ಬತ್ತಿಹೋಗಿರುವುದು. 
ಜಿಲ್ಲೆ

ಹಂಗಳ ಹೋಬಳಿಯಲ್ಲಿ ಹೆಚ್ಚಿದ ಅಂತರ್ಜಲ ಸಮಸ್ಯೆ

ಅಭಿನಯ್ ಎಚ್.ಎಂ

ಗುಂಡ್ಲುಪೇಟೆ: ಗುಂಡ್ಲು ನದಿಯ ಉಗಮ ತಾಣವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಈ ಬಾರಿ ಸರಿಯಾಗಿ ಮಳೆ ಬೀಳದ ಪರಿಣಾಮ ಹಂಗಳ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಸಮಸ್ಯೆ ಹೆಚ್ಚಾಗಿ ಜನ ಮತ್ತು ಜಾನುವಾರುಗಳು ನೀರಿಲ್ಲದೆ ಬಸವಳಿಯುವಂತಾಗಿದೆ.

ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಮಾಡಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇನ್ನು ರಾಗಿ ಹಾಗೂ ಹುರುಳಿಯನ್ನು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಕಳೆದ ಕೆಲವು ತಿಂಗಳಿನಿಂದ ಮಳೆ ಬೀಳದ ಪರಿಣಾಮ ತಾಲೂಕಿನ ಕೆರೆ ಕಟ್ಟೆಗಳು ಬತ್ತಿಹೋಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗಿದ್ದರೆ, ಅಂತರ್ಜಲ ಮಟ್ಟ ಕುಸಿತದಿಂದ ಬೆಳೆಗಳಿಗೆ ನೀರು ಸಾಲದೆ ಒಣಗುತ್ತಿವೆ.

ಕಳೆದ ವರ್ಷ ಹೆಚ್ಚಾಗಿ ಬಿದ್ದ ಮಳೆ ಹಾಗೂ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ತಾಲೂಕಿನ ಕೆರೆಕಟ್ಟೆಗಳು ತುಂಬಿ ಹರಿದಿದ್ದವು. ಕಳೆದ ಮೂವತ್ತು ವರ್ಷಗಳಿಂದ ನೀರನ್ನೇ ಕಾಣದ ಹಲವಾರು ಕೆರೆಗಳು ಕೋಡಿ ಬಿದ್ದು ಹಳ್ಳಕೊಳ್ಳಗಳಲ್ಲಿ ನೀರು ಹರಿದ ಪರಿಣಾಮ ಅಂತರ್ಜಲ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಆದರೆ ಈ ಬಾರಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಳೆ ಬೀಳದ ಪರಿಣಾಮ ಹೋಬಳಿಯ ಹತ್ತಾರು ಗ್ರಾಮಗಳಲ್ಲಿ ಈಗಾಗಲೇ ಬರದ ಛಾಯೆ ಆವರಿಸಿದೆ.

ಬಂಡೀಪುರ ಕಾಡಂಚಿನ ಕಳ್ಳೀಪುರ, ಕುನಗಹಳ್ಳಿ, ಗೋಪಾಲಪುರ, ಹೊನ್ನೇಗೌಡನಹಳ್ಳಿ, ಹಂಗಳಪುರ, ಪುತ್ತನಪುರ, ಕಲಿಗೌಡನಹಳ್ಳಿ, ಮಗುವಿನಹಳ್ಳಿ ಮುಂತಾದ ಗ್ರಾಮಗಳಲ್ಲಿ ಅಂತರ್ಜಲ ಕುಸಿತ ತೀವ್ರವಾಗಿದ್ದು, ರೈತರು ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಫಸಲುಗಳು ಒಣಗುವಂತಾಗಿದೆ.

ಕಳೆದ ವರ್ಷ ಕೋಡಿ ಬಿದ್ದು ಬಾಗಿನ ಅರ್ಪಿಸಿದ್ದ ಬಹುತೇಕ ಕೆರೆಗಳು ಬರಿದಾಗಿದೆ. ಕೆಲವು ಕೆರೆಗಳಲ್ಲಿ ಸ್ವಲ್ಪ ಪ್ರಮಾಣದ ನೀರಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಬರಿದಾಗುವ ಆತಂಕ ಎದುರಾಗಿದೆ. ಹಂಗಳದ ಹಿರೀಕೆರೆ, ದೊಡ್ಡಕೆರೆ, ಬೇರಂಬಾಡಿಯ ಕೆಂಪುಸಾಗರ ಕೆರೆ, ಕಣ್ಣೇಗಾಲ ಕೆರೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದರೂ ಮಲ್ಲಯ್ಯನಪುರ ಕೆರೆ ಸಂಪೂರ್ಣ ಬತ್ತಿಹೋಗಿರುವುದರಿಂದ ಜನಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ತುಂಬಿದ್ದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಕಳ್ಳೀಪುರ ಕೆರೆಯಲ್ಲಿ ಕೆಲವು ಗುಂಡಿಗಳಲ್ಲಿ ಮಾತ್ರ ನೀರು ನಿಂತಿದೆ. ದಿನೇ ದಿನೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಗುಂಡಿಗಳಲ್ಲಿ ನಿಂತಿರುವ ಸ್ವಲ್ಪ ನೀರಿನಲ್ಲಿ ಈ ಭಾಗದ ಜಾನುವಾರುಗಳು ದಾಹ ತಣಿಸಿಕೊಳ್ಳುವಂತಾಗಿದೆ.

10 ದಿನಗಳಿಗೊಮ್ಮೆ ಸರಬರಾಜು: ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿಯಿಂದ ಬೇರೆ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದ ರೈತರು ತಮ್ಮ ಜಮೀನುಗಳಲ್ಲಿ ನೀರಾವರಿ ಹಾಗೂ ಮಳೆಯಾಶ್ರಯದಲ್ಲಿ ಬೆಳೆದಿದ್ದ ಚೆಂಡುಹೂ ಸಕಾಲದಲ್ಲಿ ನೀರು ದೊರಕದೆ ಸಂಪೂರ್ಣ ಒಣಗಿ ಹೋಗಿವೆ. ಅಲ್ಲದೆ ಜಾನುವಾರುಗಳನ್ನು ಬಿಟ್ಟು ಮೇಯಿಸಲಾಗುತ್ತಿದೆ. ಸದ್ಯ ಕುಡಿಯಲು ಕಬಿನಿಯಿಂದ ಬಹುಗ್ರಾಮ ಯೋಜನೆಯಡಿ ನೀರು ಸರಬರಾಜು ಮಾಡುತ್ತಿರುವ ಪರಿಣಾಮ ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗಿಲ್ಲ. ಆದರೂ ಸುಮಾರು 10 ಸಾವಿರ ಜನಸಂಖ್ಯೆಯಿರುವ ದೊಡ್ಡ ಗ್ರಾಮವಾದ ಹಂಗಳಕ್ಕೆ ವಾರಕ್ಕೊ ಅಥವಾ 10 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಕಳೆದ ವರ್ಷ ಬಾಗಿನ ಸಲ್ಲಿಸಿದ್ದ ಹತ್ತಕ್ಕೂ ಹೆಚ್ಚಿನ ಕೆರೆಗಳಲ್ಲಿ ನೀರು ಬತ್ತಿಹೋಗುತ್ತಿದ್ದು ಅಂತರ್ಜಲ ಮಟ್ಟ ಪಾತಾಳಕ್ಕಿಳಿಯುತ್ತಿದೆ. ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಕೆರೆಕಟ್ಟೆಗಳು ಬತ್ತಿರುವುದರಿಂದ ದನಕರುಗಳು, ಮೇಕೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದ್ದರಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡರೆ ಮಾತ್ರ ತಾಲೂಕಿನ ಅಂತರ್ಜಲ ಮಟ್ಟ ಸುಧಾರಿಸಲಿದೆ.
ಮಾಧು ರೈತ, ಹಂಗಳ ಗ್ರಾಮ

ಮಳೆ ಕೊರತೆ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಮರ್ಪಕವಾಗಿ ಮಳೆ ಬೀಳದ ಪರಿಣಾಮ ಎತ್ತರ ಪ್ರದೇಶದಲ್ಲಿರುವ ಹಂಗಳ ಹೋಬಳಿಯಲ್ಲಿ ಅಂತರ್ಜಲ ಮಟ್ಟದ ಇಳಿಕೆಯಾಗುತ್ತಿದೆ. ಸದ್ಯ ಕುಡಿಯುವ ನೀರಿನ ಸರಬರಾಜಿಗೆ ಆದ್ಯತೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು.
ಎಚ್.ಎಂ.ಗಣೇಶ್‌ಪ್ರಸಾದ್ ಶಾಸಕ ಗುಂಡ್ಲುಪೇಟೆ