ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿ ವ್ಯಾಪ್ತಿಯ ಕಾಗನೂರು, ಭೋಸ್ಮನಹಳ್ಳಿ, ಮಲಗಳಲೆ, ಆನೆಗಳಲೆ, ಕಟ್ಟೆಹೊಳೆ, ಹೊಂಕರವಳ್ಳಿ, ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.
ಸುಮಾರು 15ರಿಂದ 30 ಕಾಡಾನೆಗಳ ಹಿಂಡು ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆದ ಕಾಫಿ ಗಿಡ, ಬಾಳೆ, ಶುಂಠಿ, ಏಲಕ್ಕಿ ಮತ್ತು ಮೆಣಸು ಬೆಳೆಯನ್ನು ಸಂಪೂರ್ಣ ನಾಶಮಾಡಿವೆ. ಈ ನಡುವೆ ಕಾಡಾನೆಗಳು ರಸ್ತೆಬದಿಯ ತೋಟದೊಳಗೆ ನಿಂತಿರುವುದು ಗೋಚರಿಸುವುದಿಲ್ಲ. ಇದರಿಂದ ಸ್ಥಳೀಯರು ಭಯದಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಶಾಶ್ವತ ಪ್ರಯತ್ನ ಮಾಡಿಲ್ಲ. ನಷ್ಟಕ್ಕೊಳಗಾದ ಬೆಳೆಗೆ ಸಣ್ಣ ಪ್ರಮಾಣದ ಪರಿಹಾರ ನೀಡಲಾಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಸಚಿವರು, ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಕಾರ್ಯತಂತ್ರ ರೂಪಿಸಬೇಕು ಎಂದು ರೈತ ಸಂಘದ ಕೆ.ಹೊಸಕೋಟೆ ಹೋಬಳಿ ಘಟಕದ ಕಾರ್ಯದರ್ಶಿ ಜಯಣ್ಣ ಒತ್ತಾಯಿಸಿದ್ದಾರೆ.
ಸಕಲೇಶಪುರ ತಾಲೂಕಿನಿಂದ ಆಲೂರು ತಾಲೂಕಿಗೆ ಕಾಡಾನೆಗಳು ಬಂದಿದ್ದು, ರೈತರ ಸಸಿಮಡಿಗಳನ್ನು ನಾಶಮಾಡುತ್ತಿವೆ. ಇವುಗಳನ್ನು ಓಡಿಸಲು ತೀವ್ರತರ ಕ್ರಮ ಕೈಗೊಂಡರೆ ಆನೆ ಅಥವಾ ಮಾನವ ಪ್ರಾಣಕ್ಕೆ ಕುತ್ತಾದೀತು ಎಂಬ ಭಯ ಇದೆ. ಹೀಗಾಗಿ ಸಮಸ್ಯೆ ಎದುರಾಗದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಎಚ್ಚರಿಕೆ ವಹಿಸಲಾಗುತ್ತಿದೆ.
ರಾಜಪ್ಪ ವಲಯ ಅರಣ್ಯಾಧಿಕಾರಿ