ರಾಸುಗಳು 
ಜಿಲ್ಲೆ

ರಾಸುಗಳಲ್ಲಿ ಹೆಚ್ಚಿದ ರೋಗ ಬಾಧೆ

ಕೋಲಾರ ಡೆಸ್ಕ್

ಜಾನುವಾರು ಪ್ರಾಣ ಉಳಿಸಲು ರೈತರ ಹರಸಾಹಸ - ಚಿಕಿತ್ಸೆ ಕೊಡಿಸಲು ವೈದ್ಯರ ಕೊರತೆ

ಬೂದಿಕೋಟೆ: ಬೇಸಿಗೆ ಆರಂಭವಾಗಿರುವ ಬೆನ್ನಲ್ಲೇ ರಾಸುಗಳಲ್ಲಿ ಮಲೇರಿಯಾ ಹಾಗೂ ಕುಂದು ರೋಗ ಹೆಚ್ಚಳವಾಗುತ್ತಿದ್ದು, ರಾಸುಗಳ ಪ್ರಾಣ ಉಳಿಸಿಕೊಳ್ಳಲು ರೈತರು ಹರಸಾಹಸಪಡುವಂತಾಗಿದೆ.

ಬಂಗಾರಪೇಟೆ ತಾಲೂಕಿನ ರೈತರಿಗೆ ಕೃಷಿ ಜತೆಗೆ ಹೈನೋದ್ಯಮವು ಪ್ರಮುಖ ಆದಾಯದ ಮೂಲವಾಗಿದೆ. ಆದರೆ ಈ ಬಾರಿಯ ಬೇಸಿಗೆ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಬಿಸಿಲಿನ ತಾಪಮಾನ ಹಾಗೂ ಇತರ ಕಾರಣಗಳಿಂದ ರಾಸುಗಳಲ್ಲಿ ರೋಗಬಾಧೆ ಕಾಣಿಸಿಕೊಂಡಿದೆ. ಬಹಳ ಪ್ರಮುಖವಾಗಿ ಕುಂದು ರೋಗ ಮತ್ತು ಮಲೇರಿಯಾ ವ್ಯಾಪಕವಾಗಿ ಹರಡುತ್ತಿದ್ದು, ರೋಗದಿಂದ ರಾಸುಗಳನ್ನು ಪಾರು ಮಾಡುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಇದರೊಟ್ಟಿಗೆ ಬಿಸಿಲಿನ ತಾಪಮಾನದಿಂದ ರಾಸುಗಳನ್ನು ಕಾಪಾಡಲು ನಾನಾ ಬಗೆಯ ಕಸರತ್ತು ಮಾಡಲು ಮುಂದಾಗಿದ್ದಾರೆ.

ರಾಸುಗಳಲ್ಲಿ ನಾನಾ ಬಗೆಯ ರೋಗಗಳು ಕಾಣಿಸಿಕೊಳ್ಳುತ್ತ್ತಿರುವ ಕಾರಣ ರೋಗಕ್ಕೆ ತುತ್ತಾದ ರಾಸುಗಳಲ್ಲಿ ಹಾಲಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದಾಗಿ ರೈತರಿಗೆ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ. ತಾಲೂಕು ಸೇರಿ ಜಿಲ್ಲೆಯಲ್ಲಿ ರಾಸುಗಳಲ್ಲಿ ಕುಂದು ರೋಗ ಸಾಮಾನ್ಯವಾಗಿದ್ದು, ರೋಗದಿಂದ ಬಳಲುತ್ತಿರುವ ರಾಸುಗಳು ಜೊಲ್ಲು ಸೋರಿಸುತ್ತಾ ನಡೆದಾಡುವುದಕ್ಕೆ ಸಮಸ್ಯೆಯಾಗುತ್ತಿದೆ. ಮೇವು ಸೇವಿಸುವುದನ್ನು ನಿಲ್ಲಿಸುತ್ತಿವೆ. ಮಲೇರಿಯಾ ರೋಗಕ್ಕೆ ತುತ್ತಾದ ರಾಸುಗಳಲ್ಲಿ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತಿದ್ದು, ಹಸು ಒಣಗುತ್ತಾ ಹಾಲು ಕೊಡುವುದನ್ನು ನಿಲ್ಲಿಸುತ್ತಿದೆ. ಇದರಿಂದಾಗಿ ರೈತರಿಗೆ ರಾಸುಗಳನ್ನು ಆರೈಕೆ ಮಾಡಲು ಮತ್ತು ಚಿಕಿತ್ಸೆ ಕೊಡಿಸುವುದಕ್ಕೆ ಸಮಸ್ಯೆ ಉಂಟಾಗಿದೆ.

ನಕಲಿ ವೈದ್ಯರ ಹಾವಳಿ: ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರ ಕೊರತೆಯನ್ನು ಬಂಡವಾಳವನ್ನಾಗಿಸಿಕೊಂಡ ಕೆಲವರು ನಕಲಿ ವೈದ್ಯರ ಸೋಗಿನಲ್ಲಿ ಚಿಕಿತ್ಸೆ ನೆಪದಲ್ಲಿ ಸಾವಿರಾರು ರೂ.ಗಳನ್ನು ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹೋಬಳಿ ಸೇರಿ ಗ್ರಾಮ ಪಂಚಾಯಿತಿ ಹಾಗೂ ಇತರ ಗ್ರಾಮಗಳಲ್ಲಿ ತೆರೆದಿರುವಂತಹ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಲು ಮುಂದಾಗಿಲ್ಲ ಜತೆಗೆ ನಕಲಿ ವೈದ್ಯರ ಕಡಿವಾಣಕ್ಕೆ ಮುಂದಾಗದಿರುವುದು ನೋಡುತ್ತಿದ್ದರೆ ಹಣದ ಆಸೆಗಾಗಿ ಪರೋಕ್ಷವಾಗಿ ನಕಲಿ ವೈದ್ಯರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.

ರಾಸುಗಳಲ್ಲಿ ಕಂಡು ಬರುತ್ತಿರುವ ರೋಗಬಾಧೆ ನಿಯಂತ್ರಣಕ್ಕೆ ಔಷಧೋಪಚಾರ ಸೇರಿ ಇತರ ಕಾರ್ಯಗಳಿಗೆ ತಾಲೂಕಿನ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಇತರೆ ವೈದ್ಯರಿಗೆ ಕರೆ ಮಾಡಿದರೆ ಉತ್ತರ ನೀಡುತ್ತಿಲ್ಲ ಎಂಬ ಆರೋಪವೂ ರೈತರು ಮಾಡುತ್ತಿದ್ದಾರೆ.

ವೈದ್ಯರ ಕೊರತೆ

ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಕಾಮಸಮುದ್ರ, ಬಲಮಂದೆ ಸೇರಿ ಬಹುತೇಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿರುವ ಕಾರಣ ಗ್ರಾಮೀಣ ಭಾಗದಲ್ಲಿ ವೈದ್ಯರಿಲ್ಲದೆ ರಾಸುಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರಾಸುಗಳು ಮೃತಪಡುತ್ತಿವೆ. ಇದರಿಂದ ಹೈರಾಣಾದ ಕೆಲವು ರೈತರು ರಾಸುಗಳನ್ನು ಮಾರಲು ಮುಂದಾಗಿದ್ದಾರೆ.

ಇತ್ತೀಚೆಗೆ ರಾಸುಗಳಿಗೆ ಮಲೇರಿಯಾ ಕಾಣಿಕೊಳ್ಳುತ್ತಿದ್ದು, ಅದರ ನಿಯಂತ್ರಣಕ್ಕೆ ಸಾವಿರಾರು ರೂ. ಖರ್ಚು ಮಾಡಲಾಗುತ್ತಿದೆ. ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು ಇಲ್ಲದ ಕಾರಣ ರೋಗ ನಿಯಂತ್ರಣ ಸವಾಲಿನ ಕೆಲಸವಾಗಿದ್ದು, ವಿಧಿ ಇಲ್ಲದೆ ಖಾಸಗಿ ವೈದ್ಯರಿಂದ ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ಎದುರಾಗಿದೆ. - ಮುನಿಯಪ್ಪ ಬಲಮಂದೆ