ಜಿಲ್ಲೆ

ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರಕ್ಕೆ ಹೆಚ್ಚಿದ ಬೇಡಿಕೆ

ರಾಜಣ್ಣ

ಪಾಂಡವಪುರ: ಹಾಲು ಉತ್ಪಾದಕರಿಂದ ರಬ್ಬರ್ ಮ್ಯಾಟ್ ಹಾಗೂ ಮೇವು ಕತ್ತರಿಸುವ ಯಂತ್ರ(ಚಾಪ್ ಕಟ್ಟರ್)ಕ್ಕೆ ಬೇಡಿಕೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ ಪೂರೈಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ತಿಳಿಸಿದರು.


ತಾಲೂಕಿನ ದೊಡ್ಡಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಹಾಲು ಉತ್ಪಾದಕರಿಗೆ ರಬ್ಬರ್ ಮ್ಯಾಟ್ ವಿತರಿಸಿ ಮಾತನಾಡಿದರು.


ರಾಸುಗಳ ಆರೋಗ್ಯ ನಿರ್ವಹಣೆಗಾಗಿ ಮನ್‌ಮುಲ್ ಒಕ್ಕೂಟದ ವತಿಯಿಂದ ಶೇ.50ರ ಸಬ್ಸಿಡಿಯಲ್ಲಿ ರೈತರಿಗೆ ರಬ್ಬರ್ ಮ್ಯಾಟ್ ವಿತರಣೆ ಮಾಡಲಾಗುತ್ತಿದೆ. ರಬ್ಬರ್ ಮ್ಯಾಟ್ ಹಾಗೂ ಚಾಪ್ ಕಟ್ಟರ್‌ಗೆ ರೈತರಿಂದ ಸಾಕಷ್ಟು ಬೇಡಿಕೆ ಇರುವುದರಿಂದ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಖರೀದಿಸಿ ರೈತರಿಗೆ ಹಂತ ಹಂತವಾಗಿ ವಿತರಿಸಲಾಗುವುದು. ಈ ಸಾಲಿನಲ್ಲಿ ತಾಲೂಕಿಗೆ 2900 ರಬ್ಬರ್ ಮ್ಯಾಟ್‌ಗಳನ್ನು ಮಂಜೂರಾಗಿದ್ದು, ಈಗಾಗಲೆ 1500 ಮ್ಯಾಟ್ ಬಂದಿವೆ. ದೊಡ್ಡಬ್ಯಾಡರಹಳ್ಳಿ ವ್ಯಾಪ್ತಿಯ 14 ಡೇರಿಗಳಿಗೆ 300ಕ್ಕೂ ಅಧಿಕ ರಬ್ಬರ್ ಮ್ಯಾಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಡೇರಿ ಅಭಿವೃದ್ಧಿಗೆ ಸಹಕಾರ ನೀಡಬೇಕು. ಡೇರಿ ಉಳಿದರೆ ಒಕ್ಕೂಟ ಉಳಿಯುತ್ತದೆ. ಒಕ್ಕೂಟ ಆರ್ಥಿಕವಾಗಿ ಶಕ್ತಿಯುತವಾಗಿದ್ದರೆ ಹಾಲು ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತದೆ. ಒಕ್ಕೂಟ ನಷ್ಟವಾಗಿ ಬಾಗಿಲು ಮುಚ್ಚಿದರೆ ರೈತರು ಹಾಲನ್ನು ಚರಂಡಿಗೆ ಸುರಿಯುವ ಪರಿಸ್ಥಿತಿ ಬರುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ರೈತರು ಡೇರಿಗೆ ಜಿಡ್ಡಿನಾಂಶವಿರುವ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.


ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಮನ್‌ಮುಲ್ ಒಕ್ಕೂಟವು ಕಳೆದ 4 ವರ್ಷಗಳಿಂದಲೂ ರೈತರಿಗೆ ಸಬ್ಸಡಿ ದರದಲ್ಲಿ ರಬ್ಬರ್ ಮ್ಯಾಟ್ ವಿತರಣೆ ಮಾಡಲಾಗುತ್ತಿದೆ. ರೈತರಿಂದ ರಬ್ಬರ್ ಮ್ಯಾಟ್‌ಗೆ ಸಾಕಷ್ಟು ಬೇಡಿಕೆ ಇದೆ, ಒಕ್ಕೂಟದ ವ್ಯಾಪ್ತಿಯಲ್ಲಿ 1ಲಕ್ಷಕ್ಕೂ ಅಧಿಕ ಉತ್ಪಾದಕ ರೈತರಿದ್ದಾರೆ. ಎಲ್ಲರಿಗೂ ಒಂದೇ ಬಾರಿ ಮ್ಯಾಟ್ ಖರೀದಿಸಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಮ್ಯಾಟ್ ವಿತರಣೆ ಮಾಡುವ ಮೂಲಕ ಅನುಕೂಲ ಮಾಡಿಕೊಡಲಾಗುವುದು ಎಂದರು.


ಮಾರ್ಗವಿಸ್ತರಣಾಧಿಕಾರಿ ಜಗದೀಶ್, ಡೇರಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಸಣ್ಣಮ್ಮ, ನಿರ್ದೇಶಕರಾದ ಬೋರಮ್ಮ, ನಿಂಗರಾಜು, ಡಿ.ಎನ್.ಉಮೇಶ್, ಬಿ.ಎಂ.ನಿಂಗರಾಜು, ನಿಂಗಣ್ಣ, ಬ್ರಹ್ಮೇಶ್, ಪುಟ್ಟಸ್ವಾಮಿಶೆಟ್ಟಿ, ರತ್ನಮ್ಮ, ಪವಿತ್ರಾ, ಕಾರ್ಯದರ್ಶಿ ಸಿ.ನಾಗೇಂದ್ರ ಇತರರು ಇದ್ದರು.