ಕೊಳ್ಳೇಗಾಲ: ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಲಯನ್ಸ್ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ವರುಷ್ ಹೇಳಿದರು.
ಪಟ್ಟಣದ ಕಾರ್ನರ್ ಸ್ಟೋನ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪತ್ರಿಕೆಗಳನ್ನು ಅಗತ್ಯತೆ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ಕನ್ನಡದ ಪದಪುಂಜಗಳನ್ನು ಬೆಳೆಸುವಲ್ಲಿ ಗುರುತರವಾದ ಪಾತ್ರ ವಹಿಸುತ್ತದೆ. ಪತ್ರಿಕೆ ಹಾಗು ಪುಸ್ತಕಗಳನ್ನು ಸ್ನೇಹಿತರಾಗಿ ಹೊಂದಬೇಕು. ಇವೆರಡು ನಿಮ್ಮ ಅರಿವನ್ನು ಹೆಚ್ಚಿಸುವ ಜತೆಗೆ ಯಶಸ್ಸು ನೀಡುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಮುಂಜಾನೆ ಓದುಗರ ಕೈ ಸೇರುವ ಮುನ್ನ ಪತ್ರಿಕೆಯ ತಯಾರಿಯಲ್ಲಿ ಕಾಣದ ಕೈಗಳ ಅವಿರತ ಶ್ರಮವಿರುತ್ತದೆ. ಪ್ರತಿ ಪಟ್ಟಣ, ಹಳ್ಳಿಗಳಿಗೂ ಸೇರಿಸುವುದರಲ್ಲಿ ಸಾವಿರಾರು ಜನರ ಪರಿಶ್ರಮ ಆಗಾಧವಿರುತ್ತದೆ. ಪತ್ರಿಕೆಗಳ ಓದು ನಮಗೆ ಅನಿವಾರ್ಯವಾಗಿದೆ. ಆಗಾ ಗಿ ಪ್ರಚಲಿತ ವಿದ್ಯಮಾನದ ಜತೆಗೆ, ಉದ್ಯೋಗ ಅವಕಾಶಗಳು, ರಾಜಕಾರಣ, ಕ್ರೀಡೆ, ವಾಣಿಜ್ಯ ಕ್ಷೇತ್ರ, ವೈಚಾರಿಕ ವಿಷಯ, ಬರಹಗಾರರ ಅಂಕಣಗಳು ಇತರ ಎಲ್ಲ ವಿಷಯಗಳ ಜ್ಞಾನವನ್ನು ಪತ್ರಿಕೆಗಳು ನೀಡುತ್ತವೆ. ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತದೆ ಎಂದರು.
1566 ಯೂರೋಪ್ ದೇಶಗಳಲ್ಲಿ ಮೊದಲ ಬಾರಿಗೆ ಪತ್ರಿಕೋದ್ಯಮ ಆರಂಭಗೊಂಡಿತು. 1605ರಲ್ಲಿ ಜರ್ಮನ್‌ನಲ್ಲಿ ಇದಕ್ಕೆ ಚಾಲನೆ ದೊರೆಯಿತು. ಇನ್ನು ಭಾರತ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 1780 ಜ.2 ರಂದು ಜೇಮ್ಸ್ ಆಗಸ್ಟಸ್ ಹಿಕಿ ಅವರು ಹಿಕಿಸ್ ಬೆಂಗಾಲ್ ಗೆಜೆಟ್ ಪತ್ರಿಕೆಯನ್ನು ತೆರೆದರು. ಈ ನಿಟ್ಟಿನಲ್ಲಿ ಭಾರತದಲ್ಲಿ ಪತ್ರಿಕೋದ್ಯಮ ಆರಂಭವಾಯಿತು. ನಂತರ 1843 ರಲ್ಲಿ ಜು.1ರಂದು ರಾಜ್ಯದ ಮೊಟ್ಟ ಮೊದಲ ಕನ್ನಡ ಪತ್ರಿಕೆಯಾಗಿ ಮಂಗಳೂರು ಸಮಾಚಾರ ಬಿಡುಗಡೆಯಾಯಿತು ಎಂದರು.
ಮೊಬೈಲ್ ಅತಿಯಾದ ಬಳಕೆ ವಿನಾಶಕ್ಕೆ ದಾರಿ: ಯುವಕರು ಮೊಬೈಲ್‌ಗೆ ದಾಸರಾಗಿದ್ದಾರೆ. ಮೊಬೈಲ್ ಎನ್ನುವ ಸ್ನೇಹಿತನ ಅತಿಯಾದ ಸಹವಾಸ ವಿನಾಶಕ್ಕೆ ದಾರಿಯಾಗಿದೆ. ಅಮೂಲ್ಯವಾದ ಸಮಯವನ್ನು ಕಬಳಿಸುತ್ತದೆ. ಏಕಾಗ್ರತೆ ಕಡಿಮೆ ಮಾಡುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣು, ಕುತ್ತಿಗೆ, ಕೈಬೆರಳುಗಳ ಸಮಸ್ಯೆಗಳು ಉಂಟಾಗುತ್ತಿವೆ. ಗಂಭೀರ ವಿವರ ಎಂದರೆ ಅತಿಯಾದ ಮೊಬೈಲ್ ಬಳಕೆಯಿಂದ ಚಿಕ್ಕ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗಿರುವ ಅಂಶವಿರುವುದು ಸಂಶೋಧನೆಯಲ್ಲಿ ದೃಢಪಟ್ಟಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಪಾಲಕರು ಎಚ್ಚೆತ್ತುಕೊಂಡು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಬೇಕಿದೆ ಎಂದರು.
ಕಾರ್ನರ್ ಸ್ಟೋನ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರೋಷನ್ ಪ್ರಿನ್ಸ್ ಮಾತನಾಡಿ, ಓದುವ ಮನಸ್ಥಿತಿಯನ್ನು ಪತ್ರಿಕೆ ಹುಟ್ಟುಹಾಕುತ್ತವೆ. ಹಾಗಾಗಿ ಪಠ್ಯದ ಜತೆಗೆ ದಿನದ ಕೆಲ ಸಮಯ ಮಕ್ಕಳು ದಿನ ಪತ್ರಿಕೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ದಿನ ಪತ್ರಿಕೆ ವಿತರಕ ಮಲ್ಲೇಶ್, ಕಾರ್ನರ್ ಸ್ಟೋನ್ ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.