ವಿಜಯಪುರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು. ಗುರುಲಿಂಗಪ್ಪ ಅಂಗಡಿ, ವಿಜಯ ಜೋಶಿ ಇದ್ದಾರೆ. 
ಜಿಲ್ಲೆ

ಆಲಮಟ್ಟಿ ಜಲಾಶಯ ಹೆಚ್ಚಿಸಿ, ಸಂತ್ರಸ್ತರಿಗೆ ಪರಿಹಾರ ನೀಡಿ

ವಿಜಯವಾಣಿ ಸುದ್ದಿಜಾಲ ವಿಜಯಪುರ

ರಾಜ್ಯ ಸರ್ಕಾರ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಅಲ್ಲದೆ, ಕೂಡಲೇ ಭೂಸ್ವಾಧೀನ ಪಡಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

ಕೃಷ್ಣಾ ನ್ಯಾಯಾಧಿಕರಣದಲ್ಲಿ ಆಲಮಟ್ಟಿ ಜಲಾಶಯದ ಎತ್ತರದ ಕುರಿತು ನ್ಯಾಯಮೂರ್ತಿಗಳು ಈಗಾಗಲೇ ತಮ್ಮ ತೀರ್ಪಿನಲ್ಲಿ ಪ್ರಸ್ತಾಪಿಸಿದ್ದಾರೆ. ಜಲಾಶಯ 519.60 ಮೀಟರ್‌ನಿಂದ 524.256 ರ ವರೆಗೆ ಎತ್ತರಿಸಿದಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಕೇವಲ ತಮಗಿರುವ ತಪ್ಪು ತಿಳಿವಳಿಕೆಯಿಂದಾಗಿ ಮಹಾರಾಷ್ಟ್ರ ಸರ್ಕಾರ ಈ ವಿಚಾರದಲ್ಲಿ ತಗಾದೆ ತೆಗೆಯುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಹಿಂದೆ 2019ರಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಮಹಾರಾಷ್ಟ್ರ ಸರ್ಕಾರ ನೀರಾವರಿ ತಜ್ಞರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಸರ್ವೇ ಮಾಡಿಸಿದ್ದು, ಆಲಮಟ್ಟಿ ಜಲಾಶಯ ಮತ್ತು ಹಿನ್ನೀರಿನಿಂದಾಗಿ ಮಹಾರಾಷ್ಟ್ರದ ಸಾಂಗಲಿ, ಕೊಲ್ಹಾಪುರದ ಯಾವುದೇ ಪ್ರದೇಶ ಮುಳುಗಡೆ ಆಗುವುದಿಲ್ಲ ಎಂದು ಈಗಾಗಲೇ ಸಮಿತಿ ವರದಿ ಸಲ್ಲಿಸಿದೆ. ಈ ಹಿಂದೆ 1969ರಲ್ಲಿ ಹಿಪ್ಪರಗಿ ಮತ್ತು ಆಲಮಟ್ಟಿ ಜಲಾಶಯಗಳು ಇರಲೇ ಇಲ್ಲ. ಆಗಲೂ ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆಲಮಟ್ಟಿಯಿಂದಲೇ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಅವರು ವಾದಿಸುತ್ತಿರುವುದು ಶುದ್ಧ ಸುಳ್ಳು ಎಂದರು.

ಕೃಷ್ಣಾ ನ್ಯಾಯಾಧಿಕರಣದ ತೀರ್ಪು 2010ರಲ್ಲಿಯೇ ಬಂದಿದೆ. ಆದರೆ, ಇಲ್ಲಿಯವರೆಗೆ ಅದನ್ನು ಏಕೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿಲ್ಲ. ಈಗಾಗಲೇ ಕೃಷ್ಣಾ ನ್ಯಾಯಾಧಿಕರಣ- 2 ತೀರ್ಪಿನ ಕುರಿತು ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕದವರು ವಾದ ಮಂಡಿಸಿದ್ದು, ಆಂಧ್ರಪ್ರದೇಶದವರು ಮಾತ್ರ ವಾದ ಮಂಡಿಸಬೇಕಿದೆ. ಅದಾದ ಮೇಲೆ ಕೇಂದ್ರ ಸರ್ಕಾರ ಗೆಜೆಟ್‌ಗೆ ಸಮ್ಮತಿ ಕೊಡಲಿದೆ. ರಾಜ್ಯ ಸರ್ಕಾರ ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಸೂಕ್ತವಾಗಿ ನಿಭಾಯಿಸಿ ಜಲಾಶಯ ಎತ್ತರ ಹೆಚ್ಚಿಸಿದ್ದಲ್ಲಿ 130 ಟಿಎಂಸಿ ನೀರು ಬಳಸಲು ರಾಜ್ಯಕ್ಕೆ ಅನುಮತಿ ಸಿಗಲಿದ್ದು, ಅದರಿಂದ 15 ಲಕ್ಷ ಎಕರೆ ನೀರಾವರಿಗೊಳಪಡಲಿದೆ ಎಂದು ಹೇಳಿದರು.

ಸರ್ಕಾರ ಕೂಡಲೇ 1 ಲಕ್ಷ 4 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದರು.

ರಾಜ್ಯ ಸರ್ಕಾರ ಜಿಲ್ಲಾಸ್ಪತ್ರೆಗಳಲ್ಲಿರುವ ಜನ ಔಷಧಿ ಕೇಂದ್ರಗಳನ್ನು ಮುಚ್ಚಲು ಮುಂದಾಗಿರುವ ಕ್ರಮ ಖಂಡನಾರ್ಹ. ಜನ ಔಷಧಿ ಕೇಂದ್ರಗಳಿಂದ ಬಡ ಜನರಿಗೆ ಅಲ್ಪ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳು ಸಿಗುತ್ತಿದ್ದವು. ರಾಜ್ಯ ಸರ್ಕಾರ ಉಚಿತವಾಗಿ ಔಷಧಿಗಳನ್ನು ಕೊಡುವುದಿದ್ದರೆ ಈಗಿರುವ ಕೇಂದ್ರಗಳಿಂದ ವಿತರಿಸಲಿ. ಆದರೆ, ಖಾಸಗಿ ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲಿ ಜನ ಔಷಧಿ ಕೇಂದ್ರಗಳನ್ನು ಮುಚ್ಚುವುದು ಸರಿಯಲ್ಲ ಎಂದರು.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಸಂಸದ ಗೋವಿಂದ ಕಾರಜೋಳ, ಹಿಂದೆ ನ್ಯಾಯಮೂರ್ತಿ ಕಾಂತರಾಜು ನೇತೃತ್ವದಲ್ಲಿ ನೀಡಿದ ವರದಿ ಸಿದ್ದರಾಮಯ್ಯ ಸರ್ಕಾರ ಒಪ್ಪಿಕೊಂಡಿದೆ. ಮತ್ತೆ ಸಮಿತಿ ರಚಿಸಿ ಸಮೀಕ್ಷೆ ನಡೆಸಿದ್ದು ಯಾಕೆ ? ಸರ್ಕಾರ ಈ ವಿಚಾರದಲ್ಲಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮತ್ತು ವಿಜಯ ಜೋಶಿ ಇದ್ದರು.