ಜಿಲ್ಲೆ

ಬಾಲಕಾರ್ಮಿಕರ ಪತ್ತೆ ಕಾರ್ಯಾಚರಣೆ ಹೆಚ್ಚಲಿ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಕಾರ್ಯಾಚರಣೆ ಕೈಗೊಂಡ ಜಿಲ್ಲಾ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ತಪಾಸಣೆ ತಂಡ (ಏಪ್ರಿಲ್‌ನಿಂದ ನವೆಂಬರ್‌ವರೆಗೆ) ಒಟ್ಟು 28 ಬಾಲಕಾರ್ಮಿಕರನ್ನು ಪತ್ತೆ ಹಚ್ಚಿದೆ.

ಸಾಮಾಜಿಕ ಪಿಡುಗನ್ನು ನಿಯಂತ್ರಿಸುವ ಉದ್ದೇಶದಿಂದ ನಿರಂತರವಾಗಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದು, ಅಲ್ಲಲ್ಲಿ ಕಾನೂನು ನಿಯಮ ಉಲ್ಲಂಸುವವರಿಗೆ ಬಿಸಿ ಮುಟ್ಟಿಸಲಾಗುತ್ತಿದೆ. ರಕ್ಷಿಸಲ್ಪಟ್ಟ 28 ಮಂದಿ ಪೈಕಿ 24 ಕಿಶೋರ ಬಾಲಕಾರ್ಮಿಕರು (21 ಗಂಡು ಮತ್ತು 3 ಹೆಣ್ಣು) ಹಾಗೂ 4 ಬಾಲಕಾರ್ಮಿಕರು ಸೇರಿದ್ದಾರೆ. ಅದರಲ್ಲೂ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿಯೇ ಹೆಚ್ಚಿನ ಬಾಲಕಾರ್ಮಿಕರು ಇದ್ದಾರೆ.

ಬಾಲಕಾರ್ಮಿಕ ಮುಕ್ತ ಜಿಲ್ಲೆ : ಜಿಲ್ಲಾ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ತಪಾಸಣೆಯ ತಂಡದ ಕಾರ್ಯಾಚರಣೆ ಮತ್ತು ವಿವಿಧ ಇಲಾಖೆಗಳ ಜಾಗೃತಿ ಕಾರ್ಯಕ್ರಮಗಳ ಮೂಲಕ ಚಿಕ್ಕಬಳ್ಳಾಪುರವನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಗುರುವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸದ್ಯಸರ ಸಭೆ ಹಾಗೂ ಜಿಲ್ಲಾಮಟ್ಟದ ಕಾರ್ಯಪಡೆ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ಮುಕ್ತಗೊಳಿಸಲು ಜಿಲ್ಲೆಯ ವಿವಿಧೆಡೆ ಹೆಚ್ಚಿನ ಕಾರ್ಯಾಚರಣೆಗೆ ಆದೇಶಿಸಿದರು.

ಸಂಘಟಿತ ಯತ್ನ: ಬಾಲಕಾರ್ಮಿಕರಿಗೆ ಸರ್ಕಾರದ ಪುನರ್ವಸತಿ ಸವಲತ್ತುಗಳನ್ನು ಜಿಲ್ಲಾಡಳಿತದ ವತಿಯಿಂದ ಒದಗಿಸಲಾಗುತ್ತಿದೆ. ಈಗಾಗಲೇ ನಿಯಮ ಉಲ್ಲಂಸುವ ಕಾರ್ಖಾನೆ, ಮಳಿಗೆ, ಹೋಟೆಲ್ ಹಾಗೂ ಇತರ ಸಂಸ್ಥೆಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ರವೀಂದ್ರ ತಿಳಿಸಿದರು.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಯು ಮಕ್ಕಳನ್ನು ದೈಹಿಕವಾಗಿ, ನೈತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ, ಸವಾರ್ಂಗೀಣ ಪ್ರಗತಿಯ ಅವಕಾಶಗಳನ್ನು ತಡೆಗಟ್ಟುತ್ತದೆ. ಶಿಕ್ಷಣ ವಂಚಿತ ಹಾಗೂ ದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನು ರಾಷ್ಟ್ರದ ಮುಖ್ಯವಾಹಿನಿಗೆ ಕರೆತರಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಘಟಿತರಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜಾನಂದ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಎಸ್.ಎಸ್. ಮಹೇಶ್ ಕುಮಾರ್, ಕಾರ್ಮಿಕ ನಿರೀಕ್ಷಕಿ ಮಂಜುಳಾ, ಜೆ.ವಿ.ಕಲಾವಣಿ, ಜಿಲ್ಲಾ ಕೈಗಾರಿಕಾ ಕೇಂದ್ರ ಸಹಾಯಕ ನಿರ್ದೇಶಕ ಶಾಜಿಯಾ ಖಾನಂ, ನಗರಸಭೆ ಪರಿಸರ ನಿಯಂತ್ರಣಾಧಿಕಾರಿ ಪಿ.ಉಮಾಶಂಕರ್ ಮತ್ತಿತರ ಅಧಿಕಾರಿಗಳು ಇದ್ದರು.

ದಾಳಿ ವೇಳೆ ರಕ್ಷಣೆ

ಕಾರ್ಮಿಕ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಸಂಘ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ತಂಡವು ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಕೈಗೊಳ್ಳುವ ಅನಿರೀಕ್ಷಿತ ದಾಳಿ ಸಂದರ್ಭದಲ್ಲಿ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಇಲಾಖೆಗೆ ಡಿಸಿ ಸೂಚಿಸಿದರು.

ಬೆಂಬಲಿಸುವುದು ಅಪರಾಧ

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರಂತೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ (ವಾರಂಟ್ ರಹಿತ ಬಂಧಿಸಬಹುದಾದ) ಅಪರಾಧ. ಮೊದಲ ಬಾರಿ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲುಶಿಕ್ಷೆ ಇಲ್ಲವೇ 20,000 ರೂ.ಗಳಿಂದ 50,000 ರೂ.ಗಳವರೆಗೆ ದಂಡ ಇಲ್ಲವೇ ಎರಡೂ ಶಿಕ್ಷೆ, ಪುನರಾವರ್ತಿತ ಅಪರಾಧಕ್ಕೆ 1 - 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದೇ ವೇಳೆ ಬಾಲಕಾರ್ಮಿಕ ಪದ್ಧತಿಯನ್ನು ಪ್ರೋತ್ಸಾಹಿಸುವ ಪಾಲಕರಿಗೂ ಶಿಕ್ಷೆ ವಿಧಿಸಸಲಾಗುತ್ತದೆ. ತಪ್ಪಿತಸ್ಥ ಮಾಲೀಕರು ನಿಯೋಜಿಸಿಕೊಂಡ ಪ್ರತಿ ಮಗುವಿಗೆ 20,000 ರೂ.ಗಳನ್ನು ಮಕ್ಕಳ ಪುನರ್ವಸತಿಗೆ ರಚಿಸಲಾದ ಕಲ್ಯಾಣ ನಿಧಿಗೆ ಪಾವತಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.