ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಂಚಿನ ಗ್ರಾಮಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷದಿಂದ ಜೀವಹಾನಿ ಮತ್ತು ಬೆಳೆಹಾನಿಗೆ ನೀಡುತ್ತಿರುವ ಪರಿಹಾರದ ಮೊತ್ತ ಹೆಚ್ಚಿಸುವ, ರೈತರು ಮತ್ತು ಅರಣ್ಯ ಇಲಾಖೆ ನಡುವೆ ದಶಕಗಳಿಂದ ನಡೆದಿರುವ ಗಡಿ ವಿವಾದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಶಾಸಕ ಜಿ.ಡಿ.ಹರೀಶ್‌ಗೌಡ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಸಚಿವರನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಲ್ಲಿ ಹಲವು ದಶಕಗಳಿಂದ ಹತ್ತು, ಹಲವು ಸಮಸ್ಯೆಗಳಿವೆ. ಕಾಡಂಚಿನ ಗ್ರಾಮಗಳಾದ ಉಡುವೆಪುರ, ಬೆಕ್ಕೆಶೆಡ್ಡು, ಕಿಕ್ಕೇರಿಕಟ್ಟೆ, ಅಳೂರು ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಜಮೀನಿಗೂ ಅರಣ್ಯ ಇಲಾಖೆಗೂ ಗಡಿ ವಿವಾದವಿದೆ. ಈ ಭಾಗದಲ್ಲಿ ಆನೆ ತಡೆಗೋಡೆ ನಿರ್ಮಾಣವಾಗದೆ ರೈತರು ಬೆಳೆದ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿದೆ. ಮಾತ್ರವಲ್ಲದೇ ಆಗಾಗ ಜೀವಹಾನಿಯೂ ಸಂಭವಿಸುತ್ತಿದೆ ಎಂದರು.
ಈ ಸಂಬಂಧವಾಗಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ಗಡಿ ಗುರುತಿಸಬೇಕು ಹಾಗೂ ಬಾಕಿ ಉಳಿದಿರುವ ಭಾಗಕ್ಕೆ ರೈಲ್ವೆಕಂಬಿ ತಡೆಗೋಡೆ ನಿರ್ಮಿಸಿ ಪ್ರಾಣಿಗಳು ಹೊರ ಬಾರದಂತೆ ಎಚ್ಚರ ವಹಿಸಬೇಕು. ವನ್ಯಜೀವಿ ದಾಳಿಯಿಂದ ಜೀವ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ಈಗ ನೀಡುತ್ತಿರುವ 15 ಲಕ್ಷ ರೂ. ಪರಿಹಾರದ ಮೊತ್ತವನ್ನು ಕನಿಷ್ಠ 50 ಲಕ್ಷ ರೂ.ಗಳಿಗೆ ಏರಿಸಬೇಕು. ಫಸಲು ನಾಶಪಡಿಸಿದ ಪ್ರಕರಣಗಳಿಗೆ ಬೆಳೆ ಪರಿಹಾರ ನೀಡಿದರೆ ಪ್ರಯೋಜನವಾಗುವುದಿಲ್ಲ. ಬದಲಾಗಿ ತೋಟಗಾರಿಕೆ, ವಾಣಿಜ್ಯ ಮತ್ತು ಇತರ ಬೆಳೆಗಳಿಗೂ ಸೂಕ್ತ ಮತ್ತು ವೈಜ್ಞಾನಿಕ ಬೆಲೆ ನಿಗದಿ ಮಾಡಲು ಕೋರಲಾಗಿದೆ. ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನ ಜನರಿಗೆ ಗಡಿ ನೆಪವೊಡ್ಡಿ ವಿನಾಕಾರಣ ತೊಂದರೆ ನೀಡದಂತೆ ಸೂಚನೆ ನೀಡುವಂತೆ ಮನವಿ ಮಾಡಿದರು.