ಹಸಿರೆಲೆ ಗೊಬ್ಬರವನ್ನು ಬಳಸಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಸುವಂತೆ ವರುಣ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕ ಎಸ್.ಜೆ. ಹೇಮಂತ್ ರೈತರಿಗೆ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅತಿಯಾದ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇದನ್ನು ತಪ್ಪಿಸಲು ರೈತರು ಹಸಿರೆಲೆ ಗೊಬ್ಬರ ಬಿತ್ತನೆ ಬೀಜಗಳಾದ ಅಪ್ಸಣಬು, ಡಯಂಚಾ, ಹುರುಳಿ, ಹೆಸರು ಮುಂತಾದ ಬೆಳೆಗಳನ್ನು ಬೆಳೆದು, ಹೂವಾಡುವ ಮುನ್ನ ಅದನ್ನು ಭೂಮಿಗೆ ಸೇರಿಸುವ ಮೂಲಕ ಮಣ್ಣಿನ ಫಲವತ್ತತೆ ಮತ್ತು ಜೈವಿಕ ಮೌಲ್ಯವನ್ನು ಹೆಚ್ಚಿಸಲು ಕ್ರಮವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಇಳುವರಿ ತೆಗೆಯುವ ಭರದಲ್ಲಿ ರೈತರು ಮಣ್ಣಿನ ಮೌಲ್ಯಗಳನ್ನು ಕಾಪಾಡಿಕೊಳ್ಳದೆ, ಮಣ್ಣು ಸಹ ಒಂದು ಸಜೀವ ವಸ್ತು ಎಂಬುದನ್ನು ಮರೆತು, ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿಗೆ ವಿಷವುಣಿಸುತ್ತಿರುವುದು ವಿಷಾದಕರ ಸಂಗತಿ. ಪ್ರಸ್ತುತ ಸನ್ನಿವೇಶದಲ್ಲಿ ರಸಗೊಬ್ಬರಗಳನ್ನು ಯಥೇಚ್ಛವಾಗಿ ಬಳಸುತ್ತಿರುವುದರಿಂದ, ಬೆಳೆಯಲ್ಲಿ ಇಳುವರಿಯೇನೋ ಹೆಚ್ಚಾಗಬಹುದು. ಆದರೆ ಅಂತಹ ಬೆಳೆಯು ವಿಷಯುಕ್ತವಾಗಿ, ತನ್ನ ಸತ್ವ ಹಾಗೂ ಗುಣಮಟ್ಟ ಕುಂದಿಸಿಕೊಳ್ಳುವ ಜತೆಗೆ ಆ ಮಣ್ಣು ಕ್ಷಣ ಕ್ಷಣಕ್ಕೂ ತನ್ನ ಜೀವವನ್ನು ಕಳೆದುಕೊಳ್ಳುತ್ತಿರುವುದು ಮಾತ್ರ ರೈತನ ಕಣ್ಣಿಗೆ ಕಾಣಿಸುತ್ತಿಲ್ಲ. ತಾನು ಬೆಳೆಯುವವನು ಮಾತ್ರ, ತಿನ್ನುವವನ ಕಥೆ ಏನಾದರಾಗಲಿ ಎಂಬ ಮನೋಭಾವನೆಯನ್ನು ಹೊಂದಿರುವ ರೈತರು ತಮ್ಮ ನಿಲುವುಗಳನ್ನು ಇಂದೇ ಬದಲಿಸಿಕೊಳ್ಳುವ ಅನಿವಾರ್ಯವಿದೆ.
ಇಡೀ ದೇಶಕ್ಕೆ ಸತ್ವಯುತವಾದ ಹಾಗೂ ಪರಿಶುದ್ಧವಾದ ಆಹಾರವನ್ನು ನೀಡುವ ಗುರುತರವಾದಂತಹ ಜವಾಬ್ದಾರಿ ನಮ್ಮ ರೈತರ ಮೇಲಿದೆ. ಹೀಗಾಗಿ ಆದಷ್ಟು ರೈತರು ನಿಮ್ಮ ಜಮೀನಿಗೆ ಹೆಚ್ಚು ಕೊಟ್ಟಿಗೆ ಗೊಬ್ಬರ, ಸಾವಯವ ಪದಾರ್ಥಗಳು, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರಗಳನ್ನು ಸೇರಿಸುವ ಮೂಲಕ ರಸಗೊಬ್ಬರಗಳ ಬಳಕೆ ಪ್ರಮಾಣವನ್ನು ಹಂತ ಹಂತವಾಗಿ ತಗ್ಗಿಸಬೇಕು. ಇಂತಹ ಬೆಳವಣಿಗೆಯಿಂದ ನಿಮ್ಮ ಜಮೀನಿನಲ್ಲಿ ಕ್ರಮೇಣ ಜೀವರಾಸಾಯನಿಕ ಚಟುವಟಿಕೆ ಹೆಚ್ಚಾಗಿ ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಜೀವಿಗಳ ಸಂತತಿ ಹೆಚ್ಚಾಗಿ, ಮಣ್ಣಿನ ಜೈವಿಕ ಮೌಲ್ಯವು ಉತ್ತಮಗೊಳ್ಳುತ್ತದೆ. ಇದರಿಂದ ರೈತರು ಉತ್ತಮ ಗುಣಮಟ್ಟದ, ಸತ್ವಪೂರ್ಣವಾದ, ವಿಷಮುಕ್ತ ಆಹಾರ ಪದಾರ್ಥಗಳನ್ನು ಬೆಳೆಯಲು ಸಾಧ್ಯ ಎಂದು ಹೇಳಿದ್ದಾರೆ.
ಸರ್ಕಾರವು ಮಣ್ಣಿನಲ್ಲಿ ಸಾವಯವ ಮೌಲ್ಯವನ್ನು ಹೆಚ್ಚಿಸುವ ಸಲುವಾಗಿ ಪ್ರತಿವರ್ಷ ಮುಂಗಾರು ಹಂಗಾಮು ಪ್ರಾಂಭವಾಗುವ ಮುನ್ನ, ಹೋಬಳಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ಸೆಣಬು ಮತ್ತು ಡಯಂಚಾ ಬಿತ್ತನೆ ಬೀಜಗಳನ್ನು ಶೇ. 50 ರ ಸಹಾಯಧನದಲ್ಲಿ ರೈತರಿಗೆ ವಿತರಣೆ ಮಾಡುತ್ತಿದೆ. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರತಿ ವರ್ಷ ಅಥವಾ ಪ್ರತಿ ಬೆಳೆ ಬೆಲೆಯುವ ಮುನ್ನ ಈ ರೀತಿ ಮಾಡಿದಲ್ಲಿ ರಸಗೊಬ್ಬರಗಳ ಖರೀದಿಗೆ ವ್ಯಯಿಸುವ ಹಣವನ್ನು ಉಳಿತಾಯ ಮಾಡಬಹುದು. ಮತ್ತು ತಮ್ಮ ಜಮೀನಿನ ಅತ್ಯಮೂಲ್ಯವಾದ ಮಣ್ಣಿನ ಸಂಪತ್ತನ್ನು ಉಳಿಸಿ ಬೆಳೆಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸುವಂತೆ ಕೋರಿದ್ದಾರೆ.
ನಾನು ಪ್ರತಿ ವರ್ಷವೂ ಮುಂಗಾರಿನ ಸಂದರ್ಭದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಧನದಲ್ಲಿ ನೀಡುವ ಸೆಣಬಿನ ಬಿತ್ತನೆ ಬೀಜವನ್ನು ಖರೀದಿಸಿ, ನನ್ನ ಜಮೀನಿನಲ್ಲಿ ಬಿತ್ತನೆ ಮಾಡುತ್ತೇನೆ. ಅವು ಹೂವಾಡುವ ಮುನ್ನ, ರೋಟಾವೇಟರ್ ಮೂಲಕ ಭೂಮಿಗೆ ಸೇರಿಸುತ್ತೇನೆ. ಇದರಿಂದ ವರ್ಷದಿಂದ ವರ್ಷಕ್ಕೆ ನನ್ನ ಭೂಮಿಯ ಫಲವತ್ತತೆ ಹೆಚ್ಚುತ್ತಿದೆ. ಬೆಳೆಗೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗುವುದರಿಂದ ಉತ್ತಮ ಇಳುವರಿ ಗಳಿಸುತ್ತಿದ್ದೇನೆ.ಲಿಂಗಣ್ಣ, ಪ್ರಗತಿಪರ ರೈತ, ದೇವಲಾಪುರ ಗ್ರಾಮ, ವರುಣ ಹೋಬಳಿ
ವಿವಿಧ ಹಸಿರೆಲೆ ಗೊಬ್ಬರದ ಸಸ್ಯಗಳು (ಕ್ರಮವಾಗಿ ಸಾರಜನಕ, ರಂಜಕ, ಪೊಟಾಷ್)(100 ಕೆಜಿಗೆ ಪೋಷಾಕಾಶ)