ಜಿಲ್ಲೆ

ಹಾವು ಕಡಿತ ಪ್ರಕರಣಗಳ ಹೆಚ್ಚಳ: ಹಾವು ಕಚ್ಚಿದಾಗ ಏನ್ ಮಾಡಬೇಕು? ಏನ್ ಮಾಡಬಾರದು?.

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿವೆ.
ಕಳೆದ 2022 ರಲ್ಲಿ 192 ಪ್ರಕರಣಗಳು, 2023‌ ರಲ್ಲಿ 812 ಪ್ರಕರಣಗಳು, 2024 ರಲ್ಲಿ 813 ಪ್ರಕರಣಗಳು,  2025 ನೇ ಸಾಲಿನಲ್ಲಿ 186 ( ಮೇ.8 ಕ್ಕೆ) ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಇದರಿಂದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿಯಂತ್ರಣಕ್ಕೆ ತಾಂತ್ರಿಕ ವ್ಯವಸ್ಥೆಯನ್ನು ನಿರಂತರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

*ಹಾವು ಕಡಿತ ಪ್ರಕರಣಗಳು*
ಹಾವು ಕಡಿತ ಎಂದರೆ ಹಾವಿನ ಕೋರೆ ಹಲ್ಲುಗಳು ಚರ್ಮವನ್ನು ಚುಚ್ಚುವುದರಿಂದ ಉಂಟಾಗುವ ಗಾಯ.  ಹಾವು ಬೇಟೆಯನ್ನು ಹಿಡಿಯಲು ಇಲ್ಲವೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಚ್ಚುತ್ತದೆ.  ವಿಷಕಾರಿ ಅಲ್ಲದ ಹಾವು ಕಡಿತದಿಂದ ಸೌಮ್ಯವಾದ ಊತ, ಚರ್ಮದಲ್ಲಿ ಬದಲಾವಣೆಗಳು (ಕೆಂಪು ಇಲ್ಲವೇ ದೇಹದ ನೈಸರ್ಗಿಕ ಚರ್ಮದ ಬಣ್ಣಕ್ಕಿಂತ ಗಾಢವಾದ ಬಣ್ಣ), ಕಚ್ಚಿದ ಸ್ಥಳದಲ್ಲಿ ರಕ್ತಸ್ರಾವವಾಗುವ ಲಕ್ಷಣಗಳು ಕಂಡುಬರುತ್ತದೆ. ವಿಷಪೂರಿತ ಹಾವು ಕಡಿತಕ್ಕೆ ಚರ್ಮದ ಮೇಲೆ ಕಚ್ಚಿದ ಗುರುತುಗಳಿಂದ ಉಂಟಾದ ಗಾಯಗಳಾಗುತ್ತವೆ. ಕಚ್ಚಿದ ಸ್ಥಳದಲ್ಲಿ ಇಲ್ಲವೇ ದೇಹದಾದ್ಯಂತ ನೋವು ಇರುತ್ತದೆ. ಇನ್ನೂ ಬಹುತೇಕ ಸಂದರ್ಭದಲ್ಲಿ ವಿಷಕಾರಿ ಹಾವು ಕಡಿತ ನೋವನ್ನು ಉಂಟುಮಾಡುವುದಿಲ್ಲ. ಚರ್ಮದ ಬಣ್ಣ ಬದಲಾಗುತ್ತದೆ, ಬೆವರುವುದು ಮತ್ತು ಜೊಲ್ಲು ಸುರಿಸುವಿಕೆ, ವಾಕರಿಕೆ ಮತ್ತು ವಾಂತಿ, ತಲೆ ನೋವು, ತಲೆ ತಿರುಗುವಿಕೆ ಮತ್ತು ದೃಷ್ಟಿ ಮಂದವಾಗುವಿಕೆ ಹಾಗೂ ನಿಲ್ಲದ ರಕ್ತಸ್ರಾವ (ಅಸಹಜ ರಕ್ತ ಹೆಪ್ಪುಗಟ್ಟುವಿಕೆ), ಕಡಿಮೆ ರಕ್ತದೊತ್ತಡ, ವೇಗ ಹೃದಯ ಬಡಿತ ಮತ್ತು ದುರ್ಬಲ ನಾಡಿ, ಉಸಿರಾಟದ ತೊಂದರೆ, ಮುಖ ಮತ್ತು ಕೈಕಾಲುಗಳಲ್ಲಿ ಸ್ನಾಯು ದೌರ್ಬಲ್ಯ ಇಲ್ಲವೇ ಸೆಳೆತ ಮತ್ತು ಮರಗಟ್ಟುವಿಕೆ, ತೀವ್ರ ಊತದ ಲಕ್ಷಣಗಳು ಕಂಡು ಬರುತ್ತವೆ.

*ನಿಯಂತ್ರಣದ ಕ್ರಮಗಳು*
ಹಾವು ಕಡಿತಕ್ಕೆ ಒಳಗಾದಾಗ ಸಮಾಧಾನವಾಗಿರಬೇಕು. ಹಾವಿನಿಂದ ನಿಧಾನವಾಗಿ ದೂರ ಸರಿಯಬೇಕು. ಹಾವು ಕಚ್ಚಿದ ದೇಹದ ಭಾಗವನ್ನು ಏನೂ ಮಾಡಬಾರದು. ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗರ, ಬೆಲ್ಟ್, ಆಭರಣಗಳು, ವಾಚ್, ಬಿಗಿಯಾದ ಬಟ್ಟೆಗಳನ್ನು ಕಳಚಬೇಕು. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಬೇಕು. ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ತಕ್ಷಣವೇ ನೇರವಾಗಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಬೇಕು.

*ಎಚ್ಚರಿಕೆಯ ಸಲಹೆಗಳು*
ಬಹುತೇಕ ಸಂದರ್ಭಗಳಲ್ಲಿ ಹಾವು ಕಚ್ಚಿದ ತಕ್ಷಣ
ಗಾಬರಿಯಾಗುವಂತಹುದು ಸಾಮಾನ್ಯ. ಆದರೆ, ಇದರ ಅವಶ್ಯಕತೆ ಇಲ್ಲ. ಇನ್ನೂ ಗಾಯದ ಜಾಗದಲ್ಲಿ ರಕ್ತ ಬಂಧಕ ಪಟ್ಟಿ, ಬಿಗಿಯಾದ ಬಟ್ಟೆಯನ್ನು ಕಟ್ಟಬಾರದು. ಗಾಯದ ಜಾಗವನ್ನು ಕೊಯ್ಯಬಾರದು. ಏನನ್ನು ಹಚ್ಚಬಾರದು.  ಬಾಯಿಯಿಂದ ವಿಷವನ್ನು ಹೀರಬಾರದು. ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಾಟಿ ಮದ್ದು ಸೇರಿದಂತೆ ಇನ್ಯಾವುದೇ ಅಸುರಕ್ಷಿತ ಚಿಕಿತ್ಸಾ ಪದ್ಧತಿಗಳನ್ನು ಆವಲಂಬಿಸಬಾರದು. ಹಾವನ್ನು ಹಿಡಿಯುವ ಇಲ್ಲವೇ ಕೊಲ್ಲುವ ಪ್ರಯತ್ನ ಮಾಡಬಾರದು.