ಜಮಖಂಡಿ: ಎಸ್‌ಸಿ ಮತ್ತು ಎಸ್‌ಟಿ ಜನಾಂಗದ ಜನಸಂಖ್ಯೆಗನುಗಣವಾಗಿ ಮೀಸಲಾತಿ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿ ವಾಲ್ಮೀಕಿ, ನಾಯಕ ಮಹಾಸಭಾ ತಾಲೂಕು ಘಟಕದಿಂದ ಶಾಸಕ ಆನಂದ ನ್ಯಾಮಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಘಟಕ ಅಧ್ಯಕ್ಷ ಗಂಗಾಧರ ಮರದಾನಿ ಮಾತನಾಡಿ, ರಾಜ್ಯದ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ಮತ್ತು ಸಾರ್ವಜನಿಕ ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ.17.15 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.7 ಮೀಸಲಾತಿ ನೀಡಬೇಕು. ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಕಳೆದ 208ಕ್ಕೂ ಹೆಚ್ಚು ದಿನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರಸನ್ನಾನಂದ ಸ್ವಾಮೀಜಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಇಲ್ಲಿವರೆಗೂ ಸಂವಿಧಾನಾತ್ಮಕವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆದೇಶ ಹೊರಡಿಸದೆ ಇರುವುದು ಖಂಡನೀಯ ಎಂದರು.
ಗೌರವಾಧ್ಯಕ್ಷ ಪರಸಪ್ಪ ನಾಯಕ, ವೀರ ಸಿಂಧೂರ ಲಕ್ಷ್ಮಣ ಸೇವಾ ಸಂಘದ ಅಧ್ಯಕ್ಷ ಅಂಬರೀಶ ಗುಡ್ಡದಾರ, ಹಣಮಂತ ಮುತ್ತಲಗೇರಿ, ಪ್ರದೀಪ ಸಿಂಗಾರಿ, ರಾಜು ಗುಬ್ಬಿ ಇತರರಿದ್ದರು.