ಜಿಲ್ಲೆ

ಶೇ.1 ಮೀಸಲಾತಿ ಹೆಚ್ಚಿಸಿ ಅಲೆಮಾರಿಗಳಿಗೆ ನೀಡಿ

ಗಾಯತ್ರಿ ಮಾಲಿಪಾಟೀಲ್

ಮಾನ್ವಿ: ರಾಜ್ಯ ಸರ್ಕಾರದ ಮೀಸಲಾತಿಯಿಂದ ಅಲೆಮಾರಿ ಸಮುದಾಯ ವಂಚಿತರಾಗಿದ್ದು, ಬೇಡಿಕೆಗಳ ಈಡೆರಿಕೆಗೆ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಬಳಿ ಸಂಕಷ್ಟಗಳನ್ನು ಹೇಳಿಕೊಳ್ಳಲಿದ್ದೇವೆ ಎಂದು ಪ್ರಗತಿಪರ ಸಂಘಟನೆಗಳ ತಾಲೂಕು ಸಂಚಾಲಕ ಎ.ಶರಣಕುಮಾರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಅಲೆಮಾರಿ ಸಮುದಾಯದವರು ಸಾಮಾಜಿಕ ನ್ಯಾಯದಿಂದ, ಸರ್ಕಾರಿ ಸೌಲಭ್ಯಗಳಿಂದ ಹಾಗೂ ಮಿಸಲಾತಿಯಲ್ಲಿ ವಂಚಿತರಾಗಿದ್ದಾರೆ. ಅಲೆಮಾರಿಗಳ ಬೇಡಿಕೆಗಳ ಈಡೆರಿಕೆಗಾಗಿ ರಾಜ್ಯ ಸರ್ಕಾರ ಸ್ಪಂದಿಸಿ ಜನಗಣತಿ ವರದಿಗಾಗಿ ಕಾಯದೇ ಇಗಾಗಲೇ ಪರಿಶಿಷ್ಟ ಜಾತಿಗಳಿಗೆ ನಿಗದಿಯಾಗಿರುವ ಶೇ.17 ಮೀಸಲಾತಿಯನ್ನು ಶೇ.18 ಕ್ಕೆ ಹೆಚ್ಚಿಸಬೇಕು. ಹೆಚ್ಚಿಸಿರುವ ಶೇ.1 ಮೀಸಲಾತಿ ಅಲೆಮಾರಿ ಸಮುದಾಯಗಳಿಗೆ ನೀಡಬೇಕು. ವಸತಿ, ಉದ್ಯೋಗ, ಶಿಕ್ಷಣ, ಪ್ರಾತಿನಿಧ್ಯ ಹಾಗೂ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದಿಂದ ಅಲೆಮಾರಿಗಳ ಅಭಿವೃದ್ಧಿಗೆ ಸಂಪೂರ್ಣ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ರವೀಂದ್ರ ಜಾನೇಕಲ್, ಮರಿಯಪ್ಪ ಜಾಗಿರ್ ಪನ್ನೂರ್, ಮಾರೆಪ್ಪ ಹರವಿ, ಶೇಖ ಫರೀದ್ ಉಮ್ರಿ, ಲಕ್ಷ್ಮಣ ಜಾನೆಕಲ್, ಬಿ.ಶಿವರಾಜ ಹರವಿ ಇತರರಿದ್ದರು.