ಚಿಕ್ಕಮಗಳೂರು: ಇಪಿಎಸ್-95ರಲ್ಲಿ ನಿವೃತ್ತರಾಗಿರುವ ನೌಕರರಿಗೆ ಕನಿಷ್ಠ ನಿವೃತ್ತಿ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಇಪಿಎಸ್-95 ರಾಷ್ಟ್ರೀಯ ಹೋರಾಟ ಜಿಲ್ಲಾ ಸಮಿತಿ ಸದಸ್ಯರು ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ಕ್ಷೇತ್ರಿಯ ಕಚೇರಿ ಜಿಲ್ಲಾ ಆಯುಕ್ತ ಅಶ್ವಿನ್‌ರಾಜ್ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಸೂರ್ಯ ನಾರಾಯಣ್ ಮಾತನಾಡಿ, ಇಪಿಎಸ್-95ರಲ್ಲಿ ನಿವೃತ್ತಗೊಂಡ ನೌಕರರಿಗೆ ಈಗಾಗಲೇ ಒಂದು ಸಾವಿರ ನಿವೃತ್ತಿ ಭತ್ಯೆ ನೀಡಲಾಗುತ್ತಿದೆ. ಇದನ್ನು ಕನಿಷ್ಟ 7500 ರೂ. ಗಳವರೆಗೆ ಹೆಚ್ಚಿಸಿ ಮಂಜೂರು ಮಾಡಿದರೆ ವಯೋಸಹಜ ಕಾಲದಲ್ಲಿ ವೈದ್ಯಕೀಯ ಖರ್ಚುಗಳಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ವೇತನ ಹೆಚ್ಚಳಗೊಳಿಸುವ ಸಂಬಂಧ ರಾಷ್ಟ್ರೀಯ ಹೋರಾಟ ಸಮಿತಿಯು ದೆಹಲಿಯ ಜಂತರ್‌ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿತ್ತು. ಇದನ್ನು ತಿಳಿದ ಕೇಂದ್ರದ ಕಾರ್ಮಿಕ ಹಾಗೂ ಎಂಪ್ಲಾಯಿಟ್‌ಮೆಂಟ್ ಸಚಿವ ಭೂಪೇಶ್ ಗುಪ್ತ ಯಾದವ್ ಅವರು ಭರವಸೆ ನೀಡಿದ ಬಳಿಕ ಸತ್ಯಾಗ್ರಹ ಕೈಬಿಟ್ಟರೂ ಇದುವರೆಗೂ ಯಾವುದೇ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ನಿವೃತ್ತ ನೌಕರರು ವೇತನ ಹೆಚ್ಚಳಕ್ಕೆ ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹೀಗಾಗಿ ಕೇಂದ್ರ ಸಚಿವರ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಇಪಿಎಫ್‌ಓ ಮುಖಾಂತರ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುತ್ತಿದೆ. ಜನವರಿ 26 ರೊಳಗೆ ಕನಿಷ್ಟ ನಿವೃತ್ತಿ ವೇತನ ಹೆಚ್ಚಿಸ ಬೇಕು ಎಂದು ಆಗ್ರಹಿಸಿದರು.