ವಿಜಯವಾಣಿ ಸುದ್ದಿಜಾಲ ಧಾರವಾಡ
ವೃತ್ತಿ ಜೀವನ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ತಂತ್ರಜ್ಞಾನವನ್ನು ಮಾರ್ಗದರ್ಶಕವಾಗಿ ಸ್ವೀಕರಿಸಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪ ಕುಲಪತಿ ಡಾ. ಎಸ್. ವಿದ್ಯಾಶಂಕರ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ತಂತ್ರಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಬದಲಾವಣೆ ದಿನಗಳಲ್ಲಿ ಇಂಜಿನಿಯರ್ಸ್ಗಳು ತಮ್ಮ ಜ್ಞಾನ ಹಾಗೂ ಕೌಶಲಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಿದೆ. ನಿರಂತರ ಕಲಿಕೆಯಿಂದ ಜ್ಞಾನ ವೃದ್ಧಿಯಾಗಲಿದೆ ಎಂದರು.
ಎಸ್ಡಿಎಂಇ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ ಮಾತನಾಡಿ, ಎಎಸ್ಡಿಎಂಇ ಸೊಸೈಟಿ 45 ವರ್ಷಗಳಿಂದ ಅತ್ಯುತ್ತಮ ತಾಂತ್ರಿಕ ಕುಶಾಗ್ರಮತಿ ಮತ್ತು ಉತ್ತಮ ಮೌಲ್ಯಗಳೊಂದಿಗೆ ಇಂಜಿನಿಯರ್ಸ್ಗಳನ್ನು ತಯಾರು ಮಾಡುವಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಕಾಲೇಜಿನ ಹಿಂದಿನ ಪ್ರಾಂಶುಪಾಲರ ಸೇವೆ ಸ್ಮರಿಸಿದ ಅವರು, ಕಾಲೇಜಿನ ಅಭಿವೃದ್ಧಿಯಲ್ಲಿ ಎಲ್ಲ ಅಧ್ಯಾಪಕರ ಸೇವೆ ಸ್ಮರಣೀಯ ಎಂದರು.
ಕಾಲೇಜಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಲತಾ ಶ್ರೀಪಾದ ನಾಯಕ ಅವರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಇದಲ್ಲದೆ 7 ವಿಭಾಗಗಳಲ್ಲಿ ಹೆಚ್ಚು ಅಂಕಗಳಿಸಿದ ತಲಾ ಮೂವರು ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಲಾಯಿತು. 696 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಶೈಕ್ಷಣಿಕ ಡೀನ್ ಡಾ. ವಿಜಯಾ ಸಿ. ಪ್ರಮಾಣವಚನ ಬೋಧಿಸಿದರು. ಎಸ್ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ಆಡಳಿತ ಮಂಡಳಿ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು, ಡೀನ್ಗಳು, ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಇತರರು ಇದ್ದರು.
ಪ್ರಾಂಶುಪಾಲ ಡಾ.ರಮೇಶ ಚಕ್ರಸಾಲಿ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೊ. ವಿ.ಕೆ. ಪರ್ವತಿ ಮತ್ತು ಪ್ರೊ. ಇಂದಿರಾ ಉರ್ಮಜಿ ನಿರೂಪಿಸಿದರು.