ಜಿಲ್ಲೆ

ಸರ್ಕಾರಿ ಶಾಲೆ, ಪ್ರವೇಶಾತಿ ದಾಖಲೆ : ಉಪ್ಪಿನಂಗಡಿ ಮಾದರಿ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಖಾಸಗಿ ಶಾಲೆಗಳತ್ತ ಒಲವು ಹೆಚ್ಚುತ್ತಿರುವುದರ ನಡುವೆಯೂ ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲೆ ಪ್ರಬಲ ಪೈಪೋಟಿ ಒಡ್ಡುತ್ತಿದ್ದು, ಈ ಬಾರಿ ಆರುನೂರಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿಗೊಳ್ಳುವ ಮೂಲಕ ಶಾಲೆಯ ಇತಿಹಾಸದಲ್ಲೇ ದಾಖಲೆ ಬರೆದಿದೆ.

ಒಂದರಿಂದ ಎಂಟರ ತನಕ ಪ್ರತಿ ತರಗತಿಗೂ ತಲಾ ಎರಡು ವಿಭಾಗಗಳಿದ್ದು, 524 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎಸ್‌ಡಿಎಂಸಿ ಸಹಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯು.ಕೆ.ಜಿ ಮತ್ತು ಎಲ್.ಕೆ.ಜಿ ತರಗತಿಗಳಲ್ಲೂ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಬ್ರಿಟಿಷರ ಆಡಳಿತ ಸಂದರ್ಭ ಅಂದರೆ 1837ರಲ್ಲಿ ಈ ಶಾಲೆ ಸ್ಥಾಪನೆಯಾಗಿದ್ದು, ಮೂರು ದಶಕಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಕುಸಿತ ಕಂಡಿತ್ತು. ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿದೆ.

ಉಪ್ಪಿನಂಗಡಿ ಪೇಟೆಯ ಹದಯ ಭಾಗದಲ್ಲಿರುವ ಈ ಸರ್ಕಾರಿ ಮಾದರಿ ಶಾಲೆಗೆ ಹಳೇ ವಿದ್ಯಾರ್ಥಿ ಯು.ವಿ.ಭಟ್ ಎಂಬುವರು 60 ಲಕ್ಷ ರೂ. ದಾನ ನೀಡಿದ್ದು, ಈ ಹಣದಿಂದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಕಟ್ಟಡದ ಅರ್ಧಾಂಶ ತೆರವಾಗಿದ್ದು, 1.70 ಕೋಟಿ ರೂ. ಪರಿಹಾರ ದೊರೆತಿದೆ. ಆ ಹಣದಲ್ಲಿ ಮೂರು ಅಂತಸ್ತುಗಳ ಸುಸಜ್ಜಿತ ವಿದ್ಯಾಲಯ ನಿರ್ಮಿಸಲಾಗಿದೆ.

ವಿಜ್ಞಾನ ಶಿಕ್ಷಕಿ ಕೃಷ್ಣವೇಣಿ ಮಾರ್ಗದರ್ಶನದಲ್ಲಿ ಈ ಶಾಲೆಯ ವಿದ್ಯಾರ್ಥಿ ಅಬ್ದುಲ್ ಬಾಷಿತ್ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರಮಟ್ಟದ ಇನ್‌ಸ್ಪೈರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾನೆ. ಕೆಲವು ದಿನಗಳ ಹಿಂದೆಯಷ್ಟೇ ಜಪಾನ್‌ಗೂ ತೆರಳಿ ಅಂಗವಿಕಲರಿಗೆ ಸಹಕಾರಿಯಾದ ಯಂತ್ರವೊಂದನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾನೆ.

188 ವರ್ಷಗಳ ಇತಿಹಾಸವುಳ್ಳ ಉಪ್ಪಿನಂಗಡಿ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಖಾಸಗಿ ಶಾಲೆಗಳಿಂದಲೂ ಮಕ್ಕಳು ಇಲ್ಲಿಗೆ ದಾಖಲಾಗುತ್ತಿದ್ದಾರೆ. ಇಲ್ಲಿ ಸರ್ಕಾರದ ಯೋಜನೆಯಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳ ಸರ್ವ ಪ್ರತಿಭೆಗಳ ಅನಾವರಣಕ್ಕೆ ಪೂರಕ ಅವಕಾಶ ಕಲ್ಪಿಸಲಾಗುತ್ತಿದೆ. ಹನುಮಂತಪ್ಪ ಮುಖ್ಯ ಶಿಕ್ಷಕ ಈ ಶಾಲೆಗೆ ಬೆನ್ನೆಲುಬಾಗಿರುವ ಹಳೇ ವಿದ್ಯಾರ್ಥಿಗಳ ಕೈಜೋಡಿಸುವಿಕೆಯಿಂದಲೇ ಶಾಲೆಯು ಸುಸಜ್ಜಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಸಾಧನೆಯೊಂದಿಗೆ ಈ ಶಾಲೆ ಮತ್ತೆ ತನ್ನ ಗತವೈಭವದತ್ತ ಸಾಗುತ್ತಿರುವುದು ಸಂತಸ ತಂದಿದೆ. ಅಬ್ದುಲ್ ಮಜೀದ್ ಎಸ್‌ಡಿಎಂಸಿ ಅಧ್ಯಕ್ಷ https://www.vijayavani.net/anganwadis-are-getting-smart https://www.vijayavani.net/saligrama-koota-mahajagattu-kasaragod-unit-meeting