ಗಂಡಸಿ: ಕೆಲವು ವರ್ಷಗಳ ಹಿಂದೆ ಗ್ರಾಮಾಂತರ ಪ್ರದೇಶದ ಹಳ್ಳಿಗಳಲ್ಲಿ ದೇವಾಲಯ ಜೀರ್ಣೋದ್ಧಾರ ಮಾಡಲು ಗ್ರಾಮಸ್ಥರು ತೀರ್ಮಾನ ತೆಗೆದುಕೊಂಡಲ್ಲಿ ದಾನಿಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇರುತ್ತಿತ್ತು, ಆದರೆ ಈಗ ದಾನಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸಂತಸ ತಂದಿದೆ ಎಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಬಳಿಯ ವಡಗರಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶ್ರೀಆಂಜನೇಯಸ್ವಾಮಿ ದೇವಾಲಯದ ಪ್ರವೇಶ ಮತ್ತು ಕಳಸಾರೋಹಣ ಕಾರ್ಯಕ್ರಮದ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಲ ಬದಲಾಗಿದೆ, ದೇವಾಲಯಗಳ ಧರ್ಮ ಕಾರ್ಯಕ್ಕೆ ದಾನ ನೀಡುವವರ ಸಂಖ್ಯೆ ಹೆಚ್ಚಳವಾಗಿದ್ದು, ನನ್ನ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳಲ್ಲೂ ಹೊಸದಾಗಿ ದೇವಾಲಯಗಳು ಜೀರ್ಣೋದ್ಧಾರಗೊಂಡಿವೆ. ವಡಗರಹಳ್ಳಿ ಶ್ರೀಈಶ್ವರ ದೇವಾಲಯ ಶಿಥಿಲಗೊಂಡಿರುವುದು ನನ್ನ ಗಮನಕ್ಕೆ ಬಂದಿದ್ದು, ಗ್ರಾಮಸ್ಥರು ಜೀರ್ಣೋದ್ಧಾರ ಮಾಡುವ ತೀರ್ಮಾನ ತೆಗೆದುಕೊಂಡಲ್ಲಿ 10 ಲಕ್ಷ ರೂ.ನೀಡುವುದಾಗಿ ಧಾರ್ಮಿಕ ಸಭೆಯಲ್ಲಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಶಾಲ್ ಕುಮಾರ್ (ಮೆಟ್ರೋ ಬಾಬು) ಮಾಜಿ ತಾಪಂ ಸದಸ್ಯ ಪೂರ್ಣಚಂದ್ರ (ಆಗ್ರೋ ಬಾಬು) ಎಪಿಎಂಸಿ ಸದಸ್ಯ ಜಯರಾಮ್, ಲಿಂಗಾಪುರ ವಾಸುದೇವ್, ವಡಗರಹಳ್ಳಿ ಗ್ರಾಮಸ್ಥರು ಹಾಜರಿದ್ದರು.