ಕಡೂರು: ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆಯುವ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ದೊಡ್ಡ ಸವಾಲಾಗಿದೆ ಎಂದು ಶ್ರೀಸೀತಾ ರಾಘವ ಬ್ಯಾಂಕ್ ಅಧ್ಯಕ್ಷ ಹಂಜಿ ಶಿವಸ್ವಾಮಿ ಹೇಳಿದರು.
ಪಟ್ಟಣದ ಕೆ.ವಿ.ಕಾಲನಿಯಲ್ಲಿರುವ ಶ್ರೀಸೀತಾ ರಾಘವ ಸೌಹಾರ್ದ ಸಹಕಾರ ಬ್ಯಾಂಕ್‌ನ ಶಾಖೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ದೇಶದ ಆರ್ಥಿಕತೆ ಕುಸಿಯುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಶೆಡ್ಯೂಲ್ ಬ್ಯಾಂಕ್‌ಗಳಲ್ಲಿ ಹಣವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ನಡುವೆಯೂ ಗ್ರಾಹಕರ ನಂಬಿಕೆಯಿಂದ ನಮ್ಮ ಸಂಘ ಹೊಸದುರ್ಗ, ಕಡೂರು, ಭದ್ರಾವತಿ, ಬೆಂಗಳೂರು ಶಾಖೆಗಳು ಉತ್ತಮ ರೀತಿಯಲ್ಲಿ ಲಾಭಗಳಿಸಿ ಮುನ್ನೆಡೆಯುತ್ತಿವೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮೌಲ್ಯಗಳು ಮರೆಯಾಗಿ ಲಂಚಾವತಾರ ಹೆಚ್ಚಾಗುತ್ತಿದ್ದು, ಠೇವಣಿ ಇಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಠೇವಣಿಗಾಗಿ ಸಹಕಾರ ಬ್ಯಾಂಕ್‌ಗಳ ಮೊರೆ ಹೋಗುತ್ತಿವೆ. ಸಹಕಾರ ಸಂಘಗಳಲ್ಲಿ ಉದ್ದೇಶ ಪೂರಿತ ಸಾಲಗಾರರು ಹೆಚ್ಚುತ್ತಿದ್ದಾರೆ. ಸಾಲ ಪಡೆದು ನ್ಯಾಯಾಲಯದ ಮೊರೆ ಹೋಗುವುದು ಇವರ ಉದ್ದೇಶವಾಗಿರುತ್ತದೆ. ಕಾನೂನಿನ ರೀತಿ ಹೋರಾಟ ಮಾಡಿ ಅವರಿಂದ ಸಾಲ ವಸೂಲಾತಿ ಮಾಡಬೇಕು ಎಂದರು.
ನಮ್ಮ ಬ್ಯಾಂಕ್ ನಾಲ್ಕು ಶಾಖೆಗಳಿಂದ 117 ಕೋಟಿ ರೂ. ಸಾಲ ನೀಡಿದ್ದು, 165 ಕೋಟಿ ಠೇವಣಿ ಸಂಗ್ರಹವಾಗಿದೆ, ಒಟ್ಟಾರೆ 285 ಕೋಟಿ ವ್ಯವಹಾರ ನಡೆಯುತ್ತಿದೆ. ಕಡೂರು ಶಾಖೆಯಲ್ಲಿ 29,63 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು 35 ಕೋಟಿ ರೂ. ಸಾಲ ನೀಡಲಾಗಿದೆ ಎಂಬ ಮಾಹಿತಿ ನೀಡಿದರು.
ಬ್ಯಾಂಕ್ ಉಪಾಧ್ಯಕ್ಷ ಆದಿರಾಜಯ್ಯ, ಪ್ರಧಾನ ವ್ಯವಸ್ಥಾಪಕ ಎನ್.ಮಂಜುನಾಥ್, ಕಡೂರು ಶಾಖೆ ವ್ಯವಸ್ಥಾಪಕ ಜಿ.ಪಿ.ಚೇತನ್ ಇದ್ದರು.