ಜಿಲ್ಲೆ

ಸಾಮಾಜಿಕ ಜಾಲತಾಣ ಬಳಕೆಯಿಂದ ಆತ್ಮಹತ್ಯೆ ಪ್ರಕರಣ ಹೆಚ್ಚಳ

ಮೈಸೂರು: ಕೌಟುಂಬಿಕ ಕಾರಣ, ನಿರುದ್ಯೋಗ, ಬಡತನದೊಂದಿಗೆ ಸಾಮಾಜಿಕ ಜಾಲತಾಣದ ಅತಿಯಾದ ಚಟದಿಂದಲೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಬಿ.ಬೃಂದಾ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ನಜರ್‌ಬಾದ್‌ನ ವೈದ್ಯರ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುರ್ತು ಚಿಕಿತ್ಸೆ ಕೊಡಿಸಬೇಕು


ಮಾನಸಿಕ ಸಮಸ್ಯೆ, ಅಸಹಾಯಕತೆ ಹಾಗೂ ನಿರಾಸೆಯ ಮನೋಭಾವದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವರದಿಯಾಗುವ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.15ರಷ್ಟು ಭಾರತದಲ್ಲಿ ಘಟಿಸುತ್ತಿವೆ. 15ರಿಂದ 24 ವರ್ಷದವರು ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಇವರಲ್ಲಿ ಪುರುಷರ ಸಂಖ್ಯೆಯೇ ಅಧಿಕವಾಗಿದೆಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ ಎಂದರು.


ಆತ್ಮಹತ್ಯೆ ತಡೆಯಲು ಮಾನಸಿಕವಾಗಿ ಕಂಗಾಲಾದವರೊಂದಿಗೆ ಬೆರೆಯಬೇಕು. ಮಾದಕ, ಮದ್ಯ ವ್ಯಸನದಿಂದ ದೂರ ಇರುವಂತೆ ತಿಳಿ ಹೇಳಬೇಕು. ಸಾಮಾಜಿಕ ಬೆಂಬಲ ದೊರೆಯುವಂತೆ ಮಾಡಬೇಕು. ತುರ್ತು ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.

ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳಬೇಕು

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಮಾತನಾಡಿ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿದೆ. ಪ್ರಸ್ತುತ ಶೈಕ್ಷಣಿಕ ಒತ್ತಡವೂ ಇದಕ್ಕೆ ಕಾರಣ ಇರಬಹುದು. ಇದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಅಂಕಿ ಅಂಶಗಳನ್ನು ಗಮನಿಸಿದರೆ ಆತಂಕವಾಗುತ್ತದೆ. ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು


ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಎಲ್ಲರೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡರೆ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬಹುದು. ಪ್ರತಿಯೊಬ್ಬರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಬೇರೊಬ್ಬರಿಗೆ ಹೋಲಿಸಿಕೊಳ್ಳುವುದನ್ನುಬಿಡಬೇಕು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞೆ ಡಾ.ಮಾಲಿನಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಸಿರಾಜ್ ಅಹಮದ್ ಇನ್ನಿತರರಿದ್ದರು.