ಶಿಕಾರಿಪುರ: ಸತತ ಮಳೆಯಿಂದಾಗಿ ಭೂಮಿಯಲ್ಲಿನ ತೇವಾಂಶ ಹೆಚ್ಚಾಗಿದ್ದು, ಮೆಕ್ಕೆಜೋಳ ಇಳುವರಿ ಕುಂಠಿತಗೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ.
ತಾಲೂಕಿನಲ್ಲಿ ಒಟ್ಟು 6,000 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಆಶ್ರಿತ ಮೆಕ್ಕೆಜೋಳ ಬೆಳೆದರೆ, 13,650 ಹೆಕ್ಟೇರ್ ಮಳೆಯಾಶ್ರಿತ. ಒಟ್ಟು 19,650 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ.
ಜೂನ್ ಆರಂಭದಲ್ಲಿ ಮಳೆ ಆಗದ ಕಾರಣ ಬಹಳಷ್ಟು ರೈತರು ತಡವಾಗಿ ಬಿತ್ತನೆ ಮಾಡಿದ್ದರು. ಆದರೆ ಇದೀಗ ಮಳೆ ಹೆಚ್ಚಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಮಳೆ ಒಂದೆರಡು ದಿನದಿಂದ ಕಡಿಮೆಯಾಗಿದ್ದರೂ ಆಗಾಗ್ಗೆ ಬರುತ್ತಿದೆ. ಕಳೆದ ವಾರದಂತೆ ಮತ್ತೆ ಮಳೆ ಹೆಚ್ಚಾದರೆ ಮೆಕ್ಕೆಜೋಳ ಬೆಳೆದ ರೈತರಿಗೆ ನಷ್ಟ ಖಚಿತ.
ತಾಲೂಕಿನ ತಾಳಗುಂದ, ಹೊಸೂರು, ಕಸಬಾ ಹೋಬಳಿಗಳಲ್ಲಿ ಜೌಗು ಸಮಸ್ಯೆ ಹೆಚ್ಚಾಗಿದೆ. ತೇವಾಂಶ ಹೆಚ್ಚಾದಂತೆ ಕಳೆ ಬೆಳೆಯುತ್ತದೆ. ಹಾಗಾಗಿ ಹೊಲಗಳನ್ನು ಹಾಳುಬಿಡುವ ಬದಲು, ನಷ್ಟದಿಂದ ಹೊರಬರಲು ಕೆಲವು ರೈತರು ಪುನಃ ಬಿತ್ತನೆ ಮಾಡುತ್ತಿದ್ದಾರೆ. ಜತೆಗೆ ಯೂರಿಯೂ ಸೇರಿ ಪೂರಕವಾದ ರಸಗೊಬ್ಬರಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಇದರಿಂದಾಗಿ ಕಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಒಂದು ಎಕರೆ ಮೆಕ್ಕೆಜೋಳ ಬೆಳೆಯಲು ಕನಿಷ್ಠ 15ರಿಂದ 16 ಸಾವಿರ ರೂ. ಖರ್ಚಾಗುತ್ತದೆ. ಇಳುವರಿ ಕುಂಠಿತಗೊಂಡರೆ ರೈತರಿಗೆ ನಷ್ಟ ನಿಶ್ಚಿತ.
ಇನ್ನು ತಾಲೂಕಿನಲ್ಲಿ ಭತ್ತ ನಾಟಿ ಕಾರ್ಯ ನಿಧಾನವಾಗಿ ಪ್ರಾರಂಭವಾಗಿದ್ದು, ಈಗಾಗಲೇ ಸುಮಾರು 200 ಹೆಕ್ಟೇರ್‌ನಲ್ಲಿ ನಾಟಿ ಪೂರ್ಣಗೊಂಡಿದೆ.
ತೇವಾಂಶ ಹೆಚ್ಚಳದಿಂದ ತಪ್ಪಿಸಿಕೊಳ್ಳಲು ಪೂರಕವಾಗಿ ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹೆಚ್ಚು ಬಸಿನೀರು ಕಾಲುವೆಗಳನ್ನು ಮಾಡಬೇಕು. ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು. ಮಳೆ ಕಡಿಮೆಯಾದರೆ ಜೌಗು ಕೂಡ ಕಡಿಮೆಯಾಗುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಜತೆಗೆ ನಷ್ಟದ ಪರಿಹಾರಕ್ಕೆ ಬೆಳೆ ವಿಮೆ ಮಾಡಿಸುವ ಅಗತ್ಯವಿದೆ. ಫಸಲು ಶೇ.30 ನಷ್ಟವಾದರೂ ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಪರಿಹಾರ ನೀಡುತ್ತದೆ.ಕಿರಣ್‌ಕುಮಾರ್ ಹರ್ತಿ, ಕೃಷಿ ಸಹಾಯಕ ನಿರ್ದೇಶಕ