ಜಿಲ್ಲೆ

ಟೊಮ್ಯಾಟೊ ಬೆಲೆಯಲ್ಲಿ ಹೆಚ್ಚಳ

15 ಕೆ.ಜಿ. ಬಾಕ್ಸ್‌ಗೆ ₹350ರಿಂದ 550 ವರೆಗೆ ಮಾರಾಟ ರೈತರ ಮುಖದಲ್ಲಿ ಮಂದಹಾಸ


ಚಿಂತಾಮಣಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ವಾರದಿಂದ ಟೊಮ್ಯಾಟೊ ಬೆಲೆ ಏರಿಕೆ ಕಂಡಿದ್ದು, ರೈತರ ಮುಖದಲ್ಲಿ ಸಂತಸ ತಂದಿದೆ.
ಎರಡು ತಿಂಗಳಿನಿಂದ 15 ಕೆಜಿಯ ಟೊಮ್ಯಾಟೊ ಬಾಕ್ಸ್ ಬೆಲೆ 30ರಿಂದ 250 ರೂ.ವರೆಗೆ ಇತ್ತು, ಈಗ 350ರಿಂದ 550 ರೂ.ವರೆಗೂ ಏರಿಕೆ ಕಂಡಿರುವುದು ಬೆಳೆಗಾರನಲ್ಲಿ ಹರ್ಷ ತಂದಿದೆ.
2019ರ ಕರೊನಾಗೆ ಮೊದಲು ಟೊಮ್ಯಾಟೊಗೆ ಹೆಚ್ಚು ಬೆಲೆ ಸಿಕ್ಕಿತ್ತು. ನಂತರ 2023 ಜೂನ್‌ನಲ್ಲಿ 15 ಕೆಜಿಯ ಬಾಕ್ಸ್ ಬೆಲೆ 1000 ರೂ.ಗಳ ಗಡಿ ದಾಟಿತ್ತು. ನಂತರ ಒಂದು ವರ್ಷದಿಂದ ಟೊಮ್ಯಾಟೊ ಬೆಳೆಗಾರರು ಬೆಲೆ ಸಿಗದೆ ಕಂಗಾಲಾಗಿದ್ದರು. ಈಗ 600 ರೂ.ಗಳ ಗಡಿ ತಲುಪಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ನಿರೀಕ್ಷೆ ಇದೆ.
2023ಕ್ಕೂ ಮುನ್ನ ನಾಲ್ಕೈದು ವರ್ಷಗಳವರೆಗೆ ಉತ್ತಮ ಬೆಳೆಯಾಗಿ ಟೊಮ್ಯಾಟೊ ಕೊಳ್ಳುವವರೇ ಇಲ್ಲದಂತಾಗಿತ್ತು. ಬೆಲೆ ಕುಸಿತದಿಂದ ರೈತರು ಹಾಕಿದ್ದ ಬಂಡವಾಳ, ಕೂಲಿ ಖರ್ಚು ಕೂಡ ಮರಳಿ ಬಾರದ ಸ್ಥಿತಿ ಇತ್ತು. ಎಷ್ಟೋ ಬೆಳೆಗಾರರು ಬೆಲೆ ಕುಸಿಯುತ್ತಿದ್ದಂತೆ ಕೊಯ್ಲಿಗೆ ಬಂದಿದ್ದ ಸಲನ್ನು ಕೊಯ್ಲು ಮಾಡದೆ ಹಾಗೆಯೇ ಬಿಟ್ಟಿದ್ದೂ ಉಂಟು.


ಸಾವಿರ ರೂ. ನಿರೀಕ್ಷೆಯಲ್ಲಿ ರೈತರು
ಒಂದು ವಾರದಿಂದ ದಿಢೀರ್ ಬೆಲೆ ಏರಿಕೆ ಕಂಡಿರುವುದರಿಂದ ಬೆಳೆಗಾರರು ಮತ್ತೊಂದು ಬೆಳೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಜೂನ್ ಎರಡನೇ ವಾರದಲ್ಲಿ ಟೊಮ್ಯಾಟೋ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇತ್ತೀಚೆಗೆ ಸಮರ್ಪಕ ಮಳೆ ಇಲ್ಲದೆ, ಬಿಸಿಲು ಜಾಸ್ತಿಯಾಗಿ ನಾಟಿ ಮಾಡಿದ್ದ ಗಿಡಗಳಿಗೆ ರೋಗ ತಗುಲಿ ನಾಶಗೊಂಡಿದೆ. ಜೂನ್ ಎರಡು ಮತ್ತು ಮೂರನೇ ವಾರದಲ್ಲಿ 15 ಕೆ.ಜಿ. ಬಾಕ್ಸ್ ಟೊಮ್ಯಾಟೊ ಬೆಲೆ 1000 ರೂ. ಗಡಿ ತಲುಪಲಿದೆ ಎಂಬ ಮಾತು ಮಾರುಕಟ್ಟೆ ಆವರಣದಲ್ಲಿ ಕೇಳಿ ಬರುತ್ತಿದೆ. ಆದರೆ, ಈಗ ಸಲಿಗೆ ಬಂದಿರುವ ಕಾಯಿಗಳು ಮಾರುಕಟ್ಟೆ ಪ್ರವೇಶಿಸಿದರೆ ಬೆಲೆ ಕಡಿಮೆಯಾದರೂ ಅಚ್ಚರಿ ಇಲ್ಲ.


ರೈತರು ಏಕಕಾಲಕ್ಕೆ ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ಟೊಮ್ಯಾಟೊ ತರುವುದರಿಂದ ಬೆಲೆ ಏರಿಳಿತ ಸಹಜ. ತರಕಾರಿ ಬೆಳೆಗಳಲ್ಲಿ ಟೊಮ್ಯಾಟೊ ಬೆಲೆಯಲ್ಲಿ ಏರಿಳಿತ ಸಾಮಾನ್ಯ. ದರ ಹೀಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಬೇಡಿಕೆ ಹೆಚ್ಚಿದಂತೆ ಬೆಲೆಯೂ ಹೆಚ್ಚಾಗುತ್ತದೆ.
- ಸುಭಾಷ ರೆಡ್ಡಿ, ಟೊಮ್ಯಾಟೊ ದಲ್ಲಾಳಿ


ಮೇ ಮಾಹೆಯಲ್ಲಿ ಟೊಮ್ಯಾಟೊ ಬೆಲೆ ಏರಿಕೆ ಕಾಣಬೇಕಿತ್ತು. ಆದರೆ ಖರೀದಿಗೆ ಉತ್ತರ ಭಾರತದಿಂದ ಯಾವಯದೇ ಬೇಡಿಕೆ ಬಾರದ ಕಾರಣ ಬೆಲೆ ಕುಸಿದು ನಷ್ಟ ಅನುಭವಿಸುವಂತಾಗಿತ್ತು. ಈಗಾಗಲೇ ರೋಗ ರುಜಿನಗಳಿಗೆ ತುತ್ತಾಗಿ ಬೆಳೆ ನಷ್ಟವಾಗಿದೆ. ಮಾರುಕಟ್ಟೆಗೆ ಟೊಮ್ಯಾಟೋ ಆವಕವಾಗದೆ ಇರುವುದರಿಂದ ತಿಂಗಳ ಕೊನೇ ವಾರದಲ್ಲಿ ಬೆಲೆ ಏರಿಕೆ ಕಂಡಿದೆ. ಜೂನ್‌ನಲ್ಲಿ ಮತ್ತಷ್ಟು ಏರಿಕೆ ಕಾಣಬಹುದು.
- ಚಂದ್ರಪ್ಪ, ಬೆಳೆಗಾರ,ಮಾದಮಂಗಲ ಗ್ರಾಮ