ಜಿಲ್ಲೆ

ಭಾರತದಲ್ಲಿ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ಪ್ರಕರಣ ಹೆಚ್ಚಳ; 5 ವರ್ಷದಲ್ಲಿ ಸಾವನ್ನಪ್ಪುವ ಅಪಾಯ

ಬೆಂಗಳೂರು: ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿ 1 ಲಕ್ಷ ಜನರಲ್ಲಿ ಶೇ.10-15 ರಷ್ಟು ಮೇದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಟಿಕ್) ಕ್ಯಾನ್ಸರ್ ಪೀಡಿತರಿದ್ದು, ಭಾರತದಲ್ಲಿ ಇದರ ಪ್ರಮಾಣ ಶೇ.2.5 ರಿಂದ 3.5 ರಷ್ಟಿದೆ. ವಿದೇಶಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆ ಇದೆಯಾದರೂ ಪ್ರತಿವರ್ಷ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ ಎಂದು ಸಂಪ್ರದ ಹಾಸ್ಪಿಟಲ್ ತಜ್ಞ ವೈದ್ಯ ಡಾ.ರಾಧೆಶ್ಯಾಮ್ ನಾಯಕ್ ತಿಳಿಸಿದ್ದಾರೆ.

ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ತಡೆ ಜಾಗೃತಿ ಮಾಸಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಕ್ಯಾನ್ಸರ್ ಸಂಬಂಧಿ ಮರಣಕ್ಕೆ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ 4 ಅಥವಾ 5 ನೇ ಪ್ರಮುಖ ಕಾರಣವಾಗಿದ್ದು, ಈ ಬಗ್ಗೆ ಅರಿವಿಗೆ ಬರುವುದು ತುಂಬಾ ತಡವಾಗುವುದರು ಮರಣ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ.

ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಈ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳು. ಧೂಮಪಾನ ಮತ್ತು ಮದ್ಯಪಾನ ಈ ರೋಗಕ್ಕೆ ಪ್ರಮುಖ ಕಾರಣ. ಬೊಜ್ಜು ಮತ್ತು ಮಧುಮೇಹಗಳೂ ಸಹ ಈ ರೋಗ ಬರಲು ಕಾರಣವಾಗುತ್ತವೆ ಎಂದು ವಿವರಿಸಿದರು.

‘ಸರ್ಜರಿ, ರೇಡಿಯೇಶನ್, ಕಿಮೋಥೆರಪಿ ಮತ್ತು ಬಯೋಲಾಜಿಕಲ್ ಥೆರಪಿಗಳಿಂದ ಚಿಕಿತ್ಸೆ ನೀಡಬಹುದು. ಇತ್ತೀಚೆಗೆ ಕ್ಯಾನ್ಸರ್ ಆರೈಕೆಯಲ್ಲಿ ಹೊಸ ಬೆಳವಣಿಗೆಗಳಾಗಿದ್ದು, ಶ್ವಾಸಕೋಶ ಕ್ಯಾನ್ಸರ್ ರೋಗಿಗಳು 5 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಿದ್ದಾರೆ. ಆದರೆ ಶೇ.70 ರಷ್ಟು ಮೇದೋಜ್ಜೀರಕ ಕ್ಯಾನ್ಸರ್ ರೋಗಿಗಳು ಒಂದು ವರ್ಷದೊಳಗೆ ಸಾವನ್ನಪ್ಪುತ್ತಿದ್ದಾರೆ.

‘ಇಮ್ಯುನೋಥೆರಪಿ ಶ್ವಾಸಕೋಶದ ಕ್ಯಾನ್ಸರ್, ಕೊಲೋನ್ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್, ಮೂತ್ರಪಿಂಡ ಮತ್ತು ಹೆಪಾಟಿಕ್ ಕ್ಯಾನ್ಸರ್ ಸೇರಿ ಹಲವು ರೀತಿಯ ಕ್ಯಾನ್ಸರ್‌ಗಳ ಮುಂಜಾಗ್ರತೆ ಬದಲಾಯಿಸಿದೆ. ಆದರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಮೇಲೆ ಪರಿಣಾಮವನ್ನು ಬೀರಿಲ್ಲ ಎಂದು ಡಾ.ರಾಧೇಶ್ಯಾಮ್ ನಾಯಕ್ ವಿವರಿಸಿದರು.

ಸಂಪ್ರದ ಹಾಸ್ಪಿಟಲ್ನ ಇನ್ನೋರ್ವ ತಜ್ಞ ವೈದ್ಯರಾದ ಡಾ.ವಿನೋದ್ ಕೆ.ರಮಣಿ ಮಾತನಾಡಿ, ಹೆಚ್ಚಿನ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಅವಕಾಶವಿರುವುದಿಲ್ಲ. ಶಸ್ತ್ರಚಿಕಿತ್ಸೆಯ ನಂತರವೂ ಅನೇಕ ರೋಗಿಗಳಲ್ಲಿ ರೋಗ ಮರುಕಳಿಸುತ್ತದೆ ಎಂದು ವಿವರಣೆ ನೀಡಿದರು.