ಕಳಸದಲ್ಲಿ ಪ್ರವಾಸಿ ವಾಹನಗಳಿಂದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿರುವುದು. 
ಜಿಲ್ಲೆ

ವಾರಾಂತ್ಯದಲ್ಲಿ ಕಳಸದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಕಳಸ: ಪ್ರವಾಸಿಗರಿಂದ ತಾಲೂಕು ತುಂಬಿದ್ದು ಭಾನುವಾರ ಎಲ್ಲೆಡೆ ಜನದಟ್ಟಣೆ ಹೆಚ್ಚಾಗಿತ್ತು. ಎರಡನೇ ಶನಿವಾರ, ಭಾನುವಾರ ಹಾಗೂ ಸ್ವಾತಂತ್ರೊೃೀತ್ಸವ ರಜೆ ಪ್ರಯುಕ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಹೀಗಾಗಿ ಇಲ್ಲಿನ ಬಹುತೇಕ ರೆಸಾರ್ಟ್‌ಗಳು, ಹೋಟೆಲ್‌ಗಳು, ಹೋಂಸ್ಟೇಗಳು ಭರ್ತಿಯಾಗಿವೆ.

ಕಳಸಕ್ಕೆ ಬರುವ ಬಹುತೇಕ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯುಲ್ಲಿ ಪ್ರವಾಸಿಗರ ವಾಹನಗಳು ಸಂಚರಿಸಿವೆ. ಕೆಲವೆಡೆ ವಾಹನ ದಟ್ಟಣೆ ಉಂಟಾಗಿತ್ತು. ಮುಖ್ಯ ರಸ್ತೆಯಲ್ಲಿ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.
ಪ್ರವಾಸಿ ತಾಣಗಳಾದ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಮೈದಾಡಿ, ಕ್ಯಾತನಮಕ್ಕಿ, ವಶಿಷ್ಠಾಶ್ರಮ, ಅಂಭಾತೀರ್ಥ, ಸುರುಮನೆ ಜಲಪಾತ, ಕುರುಂಜಲ್ ಗುಡ್ಡ, ಧಾರ್ಮಿಕ ಕ್ಷೇತ್ರಗಳಾದ ಹೊರನಾಡು, ಕಳಸ ಕ್ಷೇತ್ರಗಳು ಪ್ರವಾಸಿಗರಿಂದ ಗಿಜಿಗುಡುತ್ತಿವೆ.
ಶನಿವಾರ ರಾತ್ರಿ ಕೆಲ ಪ್ರವಾಸಿಗರಿಗೆ ಹೋಟೆಲ್‌ಗಳಲ್ಲಿ ಊಟ ಸಿಗದೆ, ತಂಗಲು ರೂಂ ಸಿಗದೆ ತೊಂದರೆ ಅನುಭವಿಸಿದರು. ವಾಹನಗಳಲ್ಲಿ ಮಲಗಿ ದಿನ ದೂಡಿದರು. ಬಹುತೇಕ ಪ್ರವಾಸಿ ತಾಣಗಳಿಗೆ ಹೋಗುವ ರಸ್ತೆಗಳು ಶಿಥಿಲಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ತೊಂದರೆ ಅನುಭವಿಸಿದರು.