ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್  
ಜಿಲ್ಲೆ

ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚಳ: ಎಚ್.ಎಸ್.ಸುಂದರೇಶ್

ಶಿವಮೊಗ್ಗ: ಚುನಾವಣಾಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದ ಕಾರಣ ಪಕ್ಷಕ್ಕೆ ಸೇರ್ಪಡೆ ಆಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ನಾವು ಆಪರೇಷನ್ ಹಸ್ತ ಮಾಡುವುದಿಲ್ಲ. ಹಣ, ಹುದ್ದೆ ಆಮೀಷವೊಡ್ಡುವುದಿಲ್ಲ. ಅವರಾಗಿಯೇ ಪಕ್ಷಕ್ಕೆ ಬಂದರೆ ನಮ್ಮ ಅಭ್ಯಂತರವಿಲ್ಲ. ಸದ್ಯ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇರುವ ಕಾರಣ ಪಕ್ಷ ಬಿಡುವವರ ಸಂಖ್ಯೆ ಜಾಸ್ತಿಯಾಗಿದೆ. ಅವರಿಗೆ ಮೂರು ತಿಂಗಳಿಂದ ಪ್ರತಿಪಕ್ಷದ ನಾಯಕನ ಆಯ್ಕೆ ಕೂಡ ಮಾಡಲು ಆಗುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲೂ ಕಾಂಗ್ರೆಸ್ ಸೇರ್ಪಡೆ ಆಗುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಪಕ್ಷ ಸೇರ್ಪಡೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ಸರ್ಕಾರದ 100 ದಿನದ ಸಾಧನೆಯನ್ನು ಕಂಡು ಜನರು ಸಂತಸಗೊಂಡಿದ್ದಾರೆ. ಮುಂಬರುವ ಚುನಾವಣೆಗಳನ್ನು ಗೆಲ್ಲುವ ಮೂಲಕ ಪಕ್ಷದ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥಗೌಡ, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮುಖಂಡರಾದ ಎಸ್.ಜೆ.ಮರಿಯಪ್ಪ, ಎಸ್.ಪಿ.ಶೇಷಾದ್ರಿ, ಕಲಗೋಡು ರತ್ನಾಕರ್, ಚಂದ್ರಶೇಖರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.