ಜಿಲ್ಲೆ

ಹಾಲಿನ ದರ ಏರಿಕೆಗೆ ಪಟ್ಟು

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ಹಾಲಿನ ಖರೀದಿ ದರ ಹೆಚ್ಚಿಸಿ, ಪಶು ಆಹಾರದ ಬೆಲೆ ಕಡಿತಗೊಳಿಸಬೇಕೆಂಬ ಬೇಡಿಕೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಕರ್ನಾಟಕ ಹಾಲು ಒಕ್ಕೂಟ ಮಹಮಂಡಳ(ಕೆಎಂಎಫ್) ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನಿಂದ ಸಾವಿರಾರು ಹೋರಾಟಗಾರರು ನಗರದ ಬಮುಲ್ ಶಿಬಿರ ಕಚೇರಿ ಆವರಣದಲ್ಲಿ ಸೇರಿ ಘೋಷಣೆ ಕೂಗುತ್ತ ಹೋರಾಟಕ್ಕೆ ತೆರಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ರೈತರ ಹೋರಾಟಕ್ಕೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸಾವಿರಾರು ರೈತರು, ರೈತ ಮಹಿಳೆಯರು ಕೇಂದ್ರ ಕಚೇರಿ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಹಾಲಿಗೆ ನೀಡುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ 5ರೂ.ಗಳಿಂದ 10ರೂ.ಗೆ ಹೆಚ್ಚಿಸಬೇಕು. ಪಶು ಆಹಾರಕ್ಕೆ ಮೆಕ್ಕೆಜೋಳವನ್ನು ಖರೀದಿಸುವ ವೇಳೆ ನೇರವಾಗಿ ರೈತರಿಂದಲೇ ಖರೀದಿ ಮಾಡಬೇಕು ಎಂದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಲಿನ ದರ ಏರಿಕೆಗೆ ನಮ್ಮ ಅಭ್ಯಂತರವಿಲ್ಲ. ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಆ ಭರವಸೆ ಹುಸಿಯಾಗಿದೆ. ಖಾಸಗಿ ಹಾಲಿನ ಕಂಪನಿಗಳ ಹಾಲಿನ ದರ ಹೆಚ್ಚಿದೆ. ಆದರೆ ಕೆಎಂಎಫ್ ಮಾತ್ರ ಬೆಲೆ ಏರಿಕೆ ಮಾಡುತ್ತಿಲ್ಲ. ರೈತರ ಬದುಕು ಭದ್ರವಾಗಬೇಕು. ಈ ಹಿನ್ನೆಲೆಯಲ್ಲಿ ಬಾಕಿ ಇರುವ ಮೊತ್ತ ಬಿಡುಗಡೆ ಮತ್ತು ಹಾಲಿನ ದರ ಏರಿಕೆ ಆಗಲೇಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ರೈತರ ಹೋರಾಟಕ್ಕೆ ಕನ್ನಡ ಪರ ಮುಖಂಡರು ಹಾಜರಾಗಿ ಬೆಂಬಲ ಸೂಚಿಸಿದರು.