ಜಿಲ್ಲೆ

ದಿನಪತ್ರಿಕೆ, ಪುಸ್ತಕ ಓದಿನಿಂದ ಜ್ಞಾನಾರ್ಜನೆ ಹೆಚ್ಚಳ

Haveri - Desk - Ganapati Bhat

ರಟ್ಟಿಹಳ್ಳಿ: ದಿನಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವಿಕಸನ ಮತ್ತು ಭಾಷಾ ಕೌಶಲ ಬೆಳವಣಿಗೆಯಾಗುತ್ತದೆ ಎಂದು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಪ್ರಾಚಾರ್ಯ ಎ.ಜಿ. ರಾಘವೇಂದ್ರ ಹೇಳಿದರು.

ಪಟ್ಟಣದ ಪ್ರಿಯದರ್ಶಿನಿ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಸ್ಥಳೀಯ ಧರ್ಮಗಿರಿ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪುಸ್ತಕ ಓದು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.

ಸಮಯವನ್ನು ಅನಗತ್ಯವಾಗಿ ವ್ಯಯ ಮಾಡದೇ ಪುಸ್ತಕಗಳನ್ನು ಓದುವುದರ ಮೂಲಕ ಮಕ್ಕಳ ವಿದ್ಯಾಭ್ಯಾಸದಲ್ಲಿ ಸಹಕಾರ ನೀಡಬೇಕು. ವಿವಿಧ ಸಂಘ ಸಂಸ್ಥೆಗಳು ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಓದುವಿಕೆಗೆ ಆದ್ಯತೆ ನೀಡಬೇಕು ಎಂದರು.

ಗ್ರಂಥಪಾಲಕಿ ಶಾಂತಮ್ಮ ಎಚ್. ಮಾತನಾಡಿ, ಮೊಬೈಲ್ ಬಳಕೆಯಲ್ಲಿ ಸಮಯ ವ್ಯರ್ಥ ಮಾಡದೆ, ಪುಸ್ತಕಗಳ ಓದಿಗೆ ಆದ್ಯತೆ ನೀಡಬೇಕು. ಓದಿನಿಂದ ಏಕಾಗ್ರತೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ಹೇಳಿದರು.

ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವತಿಯಿಂದ ಧರ್ಮಗಿರಿ ಮಠಕ್ಕೆ ಆಗಮಿಸಿವ ಸಾರ್ವಜನಿಕರಿಗೆ ಅಕ್ಕ ಪಕ್ಕದ ನಾಗರಿಕರಿಗೆ, ಭಕ್ತರಿಗೆ ಕಾದಂಬರಿಗಳು, ಕವಿ ಸಾಹಿತಿಗಳ ಪುಸ್ತಕಗಳನ್ನು ವಿತರಿಸಲಾಯಿತು.

ಸ್ಥಳೀಯರಾದ ಶೀಲಾ ಸುರಗೀಹಳ್ಳಿ, ರಾಧಾ ಪವಾರ, ಸವಿತಾ ಪವಾರ, ಲಲಿತಾ ಓವಿಕೊಪ್ಪ, ಯಲ್ಲಪ್ಪ ಚೌಹಾಣ, ಗೌರಮ್ಮ ಸುರಗೀಹಳ್ಳಿ, ಸಂಗೀತಾ ಮಾಸೂರು, ಶಿಲ್ಪಾ ಸಾಳುಂಕೆ, ರಂಜಿತಾ ಸಾಳುಂಕೆ, ಧರ್ಮಸ್ಥಳ ಸಂಘದ ಪದಾಧಿಕಾರಿಗಳು, ವಿದ್ಯಾಸಂಸ್ಥೆಯ ಎಸ್.ಎಸ್. ತಾಂದಳೆ, ಎನ್.ಡಿ. ನಾಯ್ಕ, ಯಲ್ಲಪ್ಪ ಸುರಗೀಹಳ್ಳಿ ಇತರರು ಇದ್ದರು.