ಜಿಲ್ಲೆ

ಜಲಾಶಯಗಳಿಗೆ ಒಳ ಹರಿವು ಹೆಚ್ಚಳ

ಉತ್ತರ ಕನ್ನಡ ಡೆಸ್ಕ್

ಮುಂಡಗೋಡ: ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಉತ್ತಮ ಮಳೆಗೆ ಕೆರೆ ಕಟ್ಟೆಗಳು ಭರ್ತಿಯಾಗುತ್ತಿದ್ದು, ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ.

ಜೂನ್ ತಿಂಗಳು ತಾಲೂಕಿನಲ್ಲಿ ಸುರಿದ ಅಲ್ಪ ಮಳೆಗೆ ಬಿತ್ತನೆಯಾಗಿದ್ದ ಭತ್ತ, ಗೋವಿನಜೋಳ, ಕಬ್ಬು ಸೇರಿದಂತೆ ಇತರೆ ಬೆಳೆಗಳು ಒಣಗಿ ಹಾನಿ ಅನುಭವಿಸುವ ಸ್ಥಿತಿ ನಿರ್ಮಾಣವಾಗುವ ಹಂತ ತಲುಪಿತ್ತು. ಆದರೆ, ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ರೈತರು ಮಂದಹಾಸ ಬೀರಿದ್ದು ಸಣ್ಣ ಪ್ರಮಾಣದ ನೀರು ಸಂಗ್ರಹಣಾ ಸಾಮರ್ಥ್ಯದ ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಇದರಿಂದ ರೈತರ ಮೂಗದಲ್ಲಿ ಸಂತಸ ಮೂಡಿದೆ.

ತಾಲೂಕಿನ ಬಾಚಣಕಿ ಜಲಾಶಯ ಶೇ.65, ಅತ್ತೀವೇರಿ ಶೇ.40, ಚಿಗಳ್ಳಿ ಶೇ.50, ರಾಮಾಪುರ ಶೇ.50, ಅರಶೀಣಗೇರಿ ಶೇ.40,ನ್ಯಾಸರ್ಗಿ ಶೇ.60, ಶಿಂಗನಳ್ಳಿ ಶೇ.50, ಅಟ್ಟಣಗಿ ಶೇ.50, ಸನವಳ್ಳಿ ಶೇ.60ರಷ್ಟು ನೀರು ಸಂಗ್ರಹವಾಗಿದ್ದು, ಗ್ರಾಮೀಣ ಭಾಗದಲ್ಲಿರುವ ಹಲವಾರು ಪ್ರಮುಖ ಕೆರೆಗಳಲ್ಲಿಯೂ ಶೇ.80ರಷ್ಟು ನೀರು ಸಂಗ್ರಹವಾಗಿದೆ ಎಂದು ಚಿಕ್ಕ ನೀರಾವರಿ ಇಲಾಖೆಯವರು ತಿಳಿಸಿದ್ದಾರೆ.

ತಾಲೂಕಿನಲ್ಲಿ ಶನಿವಾರ 32.4 ಮಿಮೀ ಮಳೆಯಾಗಿದ್ದು, ಇದೂವರೆಗೂ 489.6 ಮಿಮೀ ಮಳೆಯಾಗಿದೆ. ಇದೆ ರೀತಿಯಾಗಿ ಮುಂದಿನ ನಾಲ್ಕೈದು ದಿನಗಳ ಕಾಲ ನಿರಂತರವಾಗಿ ಮಳೆ ಸುರಿದರೆ ತಾಲೂಕಿನಲ್ಲಿರುವ ಎಲ್ಲ ಜಲಾಶಯಗಳು ಭರ್ತಿಯಾಗಿ ಕೋಡಿ ಹರಿಯಲಿವೆ.