ಜಿಲ್ಲೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಹೆಚ್ಚಳ

ಬೆಂಗಳೂರು: ಉತ್ತರ ಭಾರತದ ಕಡೆಯಿಂದ ಶೀತ ಮಾರುತ ಬೀಸುತ್ತಿರುವ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಸಾಮಾನ್ಯಕ್ಕಿಂತ ತುಸು ಹೆಚ್ಚಳವಾಗಿದೆ.

ಕರಾವಳಿ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಚಳಿ ಆವರಿಸಿಕೊಂಡಿದೆ. ಬಿಸಿಲ ನಾಡು ಎಂದೇ ಕರೆಯಲ್ಪಡುವ ಉತ್ತರ ಕರ್ನಾಟಕದಲ್ಲೇ ಥಂಡಿಯ ವಾತಾವರಣ ಜನರನ್ನು ಥಂಡಾ ಹೊಡೆಸಿದೆ. ಹಳೇ ಮೈಸೂರು ಭಾಗದಲ್ಲೂ ಚಳಿಯ ಅನುಭವ ಹೆಚ್ಚಿದೆ. ಮಂಗಳವಾರ ಚಿಕ್ಕಮಗಳೂರಿನಲ್ಲಿ 9.8 ಡಿಗ್ರಿ ಸೆ. ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ.

ಉತ್ತರ ಒಳನಾಡು ಪ್ರದೇಶದಲ್ಲಿ ಕಲಬುರಗಿ ಹಾಗೂ ಕೊಪ್ಪಳ ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ಸರಾಸರಿ 2-4 ಡಿಗ್ರಿ ಸೆ. ಉಷ್ಣಾಂಶ ಕುಸಿತವಾಗಿರುವುದು ಕಂಡಿದೆ. ಇದರಿಂದಾಗಿ ವಿಜಯಪುರದಲ್ಲಿ 10.9 ಡಿಗ್ರಿ ಸೆ., ಧಾರವಾಡ 11.4, ಬೆಳಗಾವಿ ವಿಮಾನನಿಲ್ದಾಣ 11.6, ಹಾವೇರಿ 12, ಬಿದರ್ 12.5, ಗದಗ 12.6, ರಾಯಚೂರು 13, ಬಾಗಲಕೋಟೆ 13.2 ಡಿಗ್ರಿ ಸೆ. ದಾಖಲಾಗಿದೆ.

ದಕ್ಷಿಣ ಒಳನಾಡು ಪ್ರದೇಶದಲ್ಲಿ ಚಳಿ ಪ್ರಮಾಣ ಉತ್ತರಕ್ಕಿಂತ ತುಸು ಕಡಿಮೆಯಿದೆ. ದಾವಣಗೆರೆಯಲ್ಲಿ 12 ಡಿಗ್ರಿ ಸೆ., ಚಾಮರಾಜನಗರ 12.7, ಮಂಡ್ಯ 12.9, ಕೆಂಪೇಗೌಡ ವಿಮಾನನಿಲ್ದಾನ 13.2, ಹಾಸನ 14.3, ಚಿತ್ರದುರ್ಗ 14.5, ಮೈಸೂರು 14.6, ಮಡಿಕೇರಿ 15.5, ಬೆಂಗಳೂರು ವಿಮಾನನಿಲ್ದಾಣ 15.5 ಡಿಗ್ರಿ. ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

ಮುಂದಿನ 2-3 ದಿನಗಳಲ್ಲಿ ಚಳಿ ಪ್ರಮಾಣ ಇನ್ನಷ್ಟು ಹೆಚ್ಚಲಿದ್ದು, ಸಂಕ್ರಾಂತಿ ಬಳಿಕ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.