ಮದ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನವನ್ನು ಪ್ರಾಂಶುಪಾಲೆ ಗೀತಾ ಜೋಗಿಗೌಡ ಉದ್ಘಾಟಿಸಿದರು. ಬಿ.ಆರ್.ಯೋಗೇಶ್ ಕನ್ಯಾಡಿ, ಲಿಂಗೇಗೌಡ, ಮುರಳಿ, ಅಂಬರಹಳ್ಳಿಸ್ವಾಮಿ, ಚೈತ್ರಾ ಇದ್ದರು. 
ಜಿಲ್ಲೆ

ತಂಬಾಕು ಸೇವನೆಯಿಂದ ಕ್ಯಾನ್ಸರ್ ಹೆಚ್ಚಳ

ರವಿಕುಮಾರ್ ಪಿ. ಕೆ

ಮದ್ದೂರು: ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ವ್ಯಾಪಕವಾಗಿ ಹರಡುತ್ತಿದ್ದು, ತಂಬಾಕಿಗೆ ಸಂಬಂಧಿಸಿದ ಕಾಯಿಲೆಗಳಿಂದ ಭಾರತದಲ್ಲಿ ಪ್ರತಿ 8 ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಂಪನ್ಮೂಲ ವ್ಯಕ್ತಿ, ಗಾಯಕ ಮತ್ತು ಕಲಾವಿದ ಅಂಬರಹಳ್ಳಿ ಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಧೂಮಪಾನದ ಒಂದೇ ಕಾರಣದಿಂದ ಪ್ರತಿ ವರ್ಷ ಒಂದು ದಶಲಕ್ಷ ಜನರು ಬಲಿಯಾಗುತ್ತಿದ್ದಾರೆ. ಅವರಲ್ಲಿ ಶೇ.70ರಷ್ಟು ಮಂದಿ 30 ರಿಂದ 69 ವರ್ಷದೊಳಗಿನವರಾಗಿದ್ದಾರೆ. ಭಾರತದಲ್ಲಿ 17.3ರಷ್ಟು ಮಹಿಳೆಯರು ಹೊಗೆಸೊಪ್ಪನ್ನು ಜಗಿಯುವ ಮೂಲಕ ಕ್ಯಾನ್ಸರ್ ಕಾರಕ ಅಂಶಗಳು ಅವರ ದೇಹದಲ್ಲಿ ಸೇರಿಕೊಂಡು ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾನ್ಸರ್ ಉಂಟಾಗುತ್ತಿದೆ. ಇದರಿಂದ ಹೃದಯದ ಕಾಯಿಲೆಗಳು ಹೆಚ್ಚಾಗಿ ಪ್ರತಿ ವರ್ಷ 2 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದಾರೆ. ಪ್ರತಿ 300 ಸಿಗರೇಟ್ ತಯಾರಿಸಲು ಒಂದು ಮರವು ಬಲಿಯಾಗುತ್ತಿದೆ. ಇದು ಪರಿಸರದ ಮೇಲೆ ಮಾರಕವಾದ ಪರಿಣಾಮ ಬೀರುತ್ತಿದೆ ಎಂದು ವಿಷಾದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನೆ ಅಧಿಕಾರಿ ಬಿ.ಆರ್. ಯೋಗೇಶ್ ಕನ್ಯಾಡಿ ಮಾತನಾಡಿ, ತಂಬಾಕು ಸೇವನೆಯಿಂದ ಶ್ವಾಸಕೋಶದ ಸಮಸ್ಯೆಗಳು ಹಾಗೂ ಗಂಟಲಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರೊಂದಿಗೆ ಪುರುಷರಲ್ಲಿ ವೀರ್ಯಾಣುಗಳ ಪ್ರಮಾಣ ಕಡಿಮೆಯಾಗಿ ಸಂತಾನೋತ್ಪತ್ತಿಗೂ ಸಮಸ್ಯೆಯಾಗುತ್ತಿದೆ. ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚಾಗಿ ಕುಟುಂಬಗಳು ಸಹ ವಿಘಟನೆ ಆಗುತ್ತಿವೆ. ಇದರಿಂದ ಭಾರತದಲ್ಲಿ ಆತಂಕಕಾರಿ ಬೆಳವಣಿಗೆ ಸೃಷ್ಟಿಯಾಗಿದೆ. ವಾರ್ಷಿಕವಾಗಿ ತಂಬಾಕು ಉತ್ಪನ್ನಗಳ ಮಾರಾಟದಿಂದ 8000 ಕೋಟಿ ರೂ. ಆದಾಯ ಬರುತ್ತಿದ್ದರೆ ತಂಬಾಕು ಸೇವಿಸಿದ ವ್ಯಕ್ತಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ವಾರ್ಷಿಕವಾಗಿ 30,000 ಕೋಟಿ ರೂ. ಹಣವನ್ನು ವ್ಯಯ ಮಾಡುತ್ತಿದ್ದಾರೆ ಇದರಿಂದ ಮಾನವನ ಆರ್ಥಿಕ ಪರಿಸ್ಥಿತಿ ಕುಸಿದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಜಾಗೃತಿ ಬೆಳೆಸಿಕೊಂಡು ತಂಬಾಕು ಸೇವನೆಯನ್ನು ತ್ಯಜಿಸಿ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಲಿಂಗೇಗೌಡ, ಸದಸ್ಯ ಮುರಳಿ, ಪ್ರಾಂಶುಪಾಲರಾದ ಗೀತಾಜೋಗಿಗೌಡ, ಮೇಲ್ವಿಚಾರಕ್ಕೆ ಚೈತ್ರಾ ಸೇರಿದಂತೆ ಇತರರಿದ್ದರು.