ಗೋಣಿಕೊಪ್ಪ: ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕು ಎಂಬ ಕೂಗು ಕೇಳುತ್ತಲೇ ಲಂಚಾವತಾರ ಹೆಚ್ಚುತ್ತಲೇ ಇದೆ ಎಂದು ಗೋಣಿಕೊಪ್ಪ ಠಾಣೆಯ ಹೆಡ್ ಕಾನ್ಸ್‌ಸ್ಟೆಬಲ್ ಎಂ.ಕೆ ಪೂವಣ್ಣ ಬೇಸರ ವ್ಯಕ್ತಪಡಿಸಿದರು.
ಕಾವೇರಿ ಪದವಿ ಕಾಲೇಜು ಗೋಣಿಕೊಪ್ಪ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಕೆ.ಪೂವಣ್ಣ, ಎಲ್ಲಿವರೆಗೂ ಲಂಚ ಕೊಡುವವರು ಇರುತ್ತಾರೋ, ಅಲ್ಲಿಯವರೆಗೂ ಲಂಚ ಪಡೆಯುವರು ಇದ್ದೇ ಇರುತ್ತಾರೆ ಎಂದರು.
ಭ್ರಷ್ಟಾಚಾರ ಪ್ರತಿಯೊಬ್ಬರಲ್ಲೂ ಹಾಸುಹೊಕ್ಕಾಗಿದೆ. ನಾವು ಮೊದಲು ಜಾಗೃತರಾಗಬೇಕು. ಆಗ ಮಾತ್ರ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯ. ಭ್ರಷ್ಟಾಚಾರದಲ್ಲಿ ಪೊಲೀಸ್ ಇಲಾಖೆ 11ನೇ ಸ್ಥಾನದಲ್ಲಿದೆ. ಆದರೆ ಇದಕ್ಕಿಂತ ಹೆಚ್ಚು ಲಂಚ ಪಡೆಯುವ 10 ಇಲಾಖೆಗಳಿವೆ ಎಂಬುದನ್ನು ಮರೆಯಬಾರದು. ಕಂದಾಯ ಇಲಾಖೆಯ ಭ್ರಷ್ಟಾಚಾರ ಯಾರಿಗೂ ಕಾಣುವುದಿಲ್ಲ. ಕಾರಣ ಅವರಿಗೆ ಸಮವಸ್ತ್ರವಿಲ್ಲ. ಪ್ರತಿ ಇಲಾಖೆಯ ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ಇಲಾಖೆ ರಚಿಸಲಾಗಿದೆ. ಅದು ತನಿಖೆ ಮಾಡಬಹುದು. ಆದರೆ ಭ್ರಷ್ಟಾಚಾರ ತಡೆಗಟ್ಟಬೇಕಾದರೆ ಪ್ರತಿಯೊಬ್ಬರೂ ಜಾಗೃತರಾಗಿ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲರಾದ ಡಾ.ಎಂ.ಬಿ.ಕಾವೇರಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕರಾದ ನಯನಾ ತಮ್ಮಯ್ಯ ಮಾತನಾಡಿ, ಭ್ರಷ್ಟಾಚಾರ ಎಂಬುದು ನಮ್ಮ ದೈನಂದಿನ ಚಟುವಟಿಕೆಯಲ್ಲಿ ಹಾಸುಹೊಕ್ಕಾಗಿದೆ. ಆದ್ದರಿಂದ ನಾನು ಲಂಚ ಕೊಡುವುದಿಲ್ಲ ಹಾಗೂ ನಾನು ಭ್ರಷ್ಟಾಚಾರಿ ಆಗಲಾರೆ ಎಂದು ಪ್ರತಿಜ್ಞೆ ಕೈಗೊಳ್ಳಬೇಕು. ಭ್ರಷ್ಟಾಚಾರ ತಡೆಯಲು ಸ್ವಯಂ ಜಾಗೃತರಾಗಬೇಕು ಎಂದರು.
ಎನ್‌ಎಸ್‌ಎಸ್ ಅಧಿಕಾರಿಗಳಾದ ಎಂ.ಎನ್.ವನಿತ್‌ಕುಮಾರ್ ಮತ್ತು ಎನ್.ಪಿ.ರೀತಾ, ಎನ್‌ಎಸ್‌ಎಸ್ ನಾಯಕರಾದ ದರ್ಶನ್, ರೀನಾ, ಸೃಜನ್, ಧಾನ್ಯ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಜರಿದ್ದರು.