ಜಿಲ್ಲೆ

ಬಿಸಿಯೂಟದಿಂದ ಹಾಜರಾತಿ ಹೆಚ್ಚಳ: ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ.ಸತೀಶ್ ಜವರೇಗೌಡ ಅಭಿಮತ

ಮೈಸೂರು: ಶುಚಿಯಾದ ಮತ್ತು ರುಚಿಕಟ್ಟಾದ ಅಡುಗೆ ಸಿದ್ಧಪಡಿಸುವುದು ಒಂದು ಅದ್ಭುತ ಕಲೆ. ಇದನ್ನು ಕರಗತ ಮಾಡಿಕೊಂಡು ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ತಯಾರಿಸಿಕೊಡುವಂತೆ ಅಕ್ಷರ ದಾಸೋಹ ಸಿಬ್ಬಂದಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ.ಸತೀಶ್ ಜವರೇಗೌಡ ಸಲಹೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಮೈಸೂರು ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಅಕ್ಷರ ದಾಸೋಹ ಸಿಬ್ಬಂದಿಗೆ ಸೋಮವಾರ ಆಯೋಜಿಸಿದ್ದ ಮೆಲ್ಲಹಳ್ಳಿ ವಲಯ ಮಟ್ಟದ ಅಡುಗೆ ತಯಾರಿಕಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಣೆ ಮಾಡುತ್ತಿರುವುದರಿಂದ ಹಾಜರಾತಿ ಪ್ರಮಾಣ ಹೆಚ್ಚಾಗಿದೆ. ಜತೆಗೆ ವಿದ್ಯಾರ್ಥಿಗಳ ದೈಹಿಕ, ಬೌದ್ಧಿಕ ಬೆಳವಣಿಗೆ ಉತ್ತಮವಾಗಿದೆ. ಇದು ಗುಣಮಟ್ಟದ ಕಲಿಕಾ ಸ್ನೇಹಿ ವಾತಾವರಣಕ್ಕೆ ಪೂರಕವಾಗಿದೆ ಎಂದರು.
ಅಡುಗೆ ಸಿಬ್ಬಂದಿ ಸ್ವಚ್ಛತೆಗೆ ಆದ್ಯತೆ ನೀಡಿ, ಸ್ಥಳೀಯವಾಗಿ ಲಭ್ಯವಿರುವ ಆಹಾರ ಪದಾರ್ಥಗಳನ್ನು ಸದ್ಬಳಕೆ ಮಾಡಿಕೊಂಡು ಅಚ್ಚುಕಟ್ಟಾದ, ರುಚಿಕಟ್ಟಾದ ಆಹಾರ ತಯಾರಿಸಬೇಕು. ಹೊಸ ಬಗೆಯ ಮತ್ತು ಹೊಸ ರುಚಿಯ ಆಹಾರ ತಯಾರಿಸುವ ಮೂಲಕ ವೃತ್ತಿಪರತೆ ಮೈಗೂಡಿಸಿಕೊಳ್ಳಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೋಬಳಿ ಕಾರ್ಯದರ್ಶಿ ಕೆ.ಜೆ.ಕುಮಾರ್ ಮಾತನಾಡಿ, ಅಡುಗೆ ತಯಾರಿಕಾ ಸ್ಪರ್ಧೆಯಲ್ಲಿ ಸಿಬ್ಬಂದಿ ಭಾಗವಹಿಸಿ ತಮ್ಮ ಕೌಶಲ ಪ್ರದರ್ಶಿಸಬೇಕು. ಸ್ಪರ್ಧೆಯಲ್ಲಿ ಸೋಲು-ಗೆಲುವಿಗಿಂತ ಭಾಗವಿಸುವಿಕೆ ಮುಖ್ಯ ಎಂದರು.
ಮೆಲ್ಲಹಳ್ಳಿ ಶಾಲೆಯ ಮುಖ್ಯಶಿಕ್ಷಕಿ ಪಿ.ಎನ್.ವೀಣಾ ಅಧ್ಯಕ್ಷತೆ ವಹಿಸಿದ್ದರು. ಬಡಗಲಹುಂಡಿ ಶಾಲೆ ಮುಖ್ಯ ಶಿಕ್ಷಕಿ ಎನ್. ಅನುಪಮಾ, ವಾಜಮಂಗಲ ಶಾಲೆಯ ಶಿಕ್ಷಕ ಮಹೇಶ್ ಶೆಟ್ಟಿ ತೀರ್ಪುಗಾರರಾಗಿದ್ದರು. ಹಾರೋಹಳ್ಳಿ ಶಾಲೆಯ ಶಿಕ್ಷಕ ಬಿ.ಸಂತೋಷ್ ಶೆಟ್ಟಿ ಇದ್ದರು.
ಬಹುಮಾನ ವಿಜೇತರು:
ಅಡುಗೆ ತಯಾರಿಕಾ ಸ್ಪರ್ಧೆಯಲ್ಲಿ ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿ ಚಿಕ್ಕರಸಮ್ಮ (ಪ್ರಥಮ), ವರಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿ ಇಂದಿರಾ (ದ್ವಿತೀಯ) ಹಾಗೂ ಹಾರೋಹಳ್ಳಿ ಸರ್ಕಾರಿ ಪ್ರೌಢಶಾಲೆ ಅಡುಗೆ ಸಿಬ್ಬಂದಿ ಶಿವಮ್ಮ (ತೃತೀಯ) ಬಹುಮಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.