ಲಕ್ಷ್ಮೇಶ್ವರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ವಾಹನ ಸವಾರರಿಗೆ ಸಿಪಿಐ ಎಸ್.ಎಂ. ಶಿರಗುಪ್ಪಿ ಪಿಎಸ್‌ಐ ಯುಸುಫ್ ಜಮೂಲಾ ಹೂವು ನೀಡಿ ತಿಳಿವಳಿಕೆ ಹೇಳಿದರು 
ಜಿಲ್ಲೆ

ನಿಯಮ ಉಲ್ಲಂಘನೆಯಿಂದ ಅಪಘಾತ ಹೆಚ್ಚಳ

ಲಕ್ಷ್ಮೇಶ್ವರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ ಮಾರ್ಗದರ್ಶನದಲ್ಲಿ ಶನಿವಾರ ಮತ್ತು ಭಾನುವಾರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ, ಕಾರು ಚಾಲಕರಿಗೆ ಸೀಟ್ ಬೆಲ್ಟ್ ಮತ್ತು ಆಟೋ, ಲಾರಿ ಚಾಲಕರಿಗೆ ಸಮವಸ್ತ್ರ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. ಸಂಚಾರ ನಿಯಮ ಪಾಲಿಸಿದ ಸವಾರರಿಗೆ ಹೂವೂ ನೀಡಿ ಅಭಿನಂದಿಸಲಾಯಿತು.

ಸಿಪಿಐ ಯರಗುಪ್ಪಿ ಮಾತನಾಡಿ, ಜೀವ ಅಮೂಲ್ಯವಾಗಿದ್ದು, ವಾಹನ ಚಲಾಯಿಸುವ ವೇಳೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘನೆಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸಿ ವಾಹನ ಚಲಾಯಿಸುವುದರಿಂದ ಸುರಕ್ಷಿತವಾಗಿರಲು ಸಾಧ್ಯವಿದೆ. ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಆಗುವ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆ ಎಂದರು.

ವೇಗವಾಗಿ ವಾಹನ ಚಲಾಯಿಸಬಾರದು, ಚಿಕ್ಕ ಮಕ್ಕಳ ಕೈಗೆ ವಾಹನಗಳನ್ನು ನೀಡಬಾರದು. ಕರ್ಕಶವಾಗಿ ಸದ್ದುಮಾಡುವ ವಾಹನಗಳ ಬಗ್ಗೆ ಇಲಾಖೆ ವಿಶೇಷ ನಿಗಾ ವಹಿಸಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ, ಆಟೋ, ಕಾರು, ಗೂಡ್ಸ್ ವಾಹನಗಳ ಚಾಲಕರು ಸಹ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಕಾನೂನಿಗೆ ಗೌರವಿಸಿ ಎಂದು ಹೇಳಿದರು. ಪಿಎಸ್‌ಐ ಯೂಸಫ್ ಜಮೂಲಾ, ಕ್ರೈಂ ವಿಭಾಗದ ಪಿಎಸ್‌ಐ ವಿ.ಜಿ. ಪವಾರ, ಎಎಸ್‌ಐ ಎನ್.ಎ. ಮೌಲ್ವಿ, ಮಾರುತಿ ಲಮಾಣಿ, ಇತರರಿದ್ದರು.