ಜಿಲ್ಲೆ

ಕರೊನಾ ಲಸಿಕೆ ಪ್ರಮಾಣ ಹೆಚ್ಚಿಸಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

ತುಮಕೂರು : ಕರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ತುರ್ತುಸಭೆ ನಡೆಸಿದ ಅವರು, ಕರೊನಾ ನಿಯಂತ್ರಣಕ್ಕಾಗಿ ಲಸಿಕೆ ಪ್ರಮಾಣ ಹೆಚ್ಚಿಸಬೇಕು, ಕರೊನಾ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಿ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ದಿನವೊಂದಕ್ಕೆ 20000ಕ್ಕಿಂತಲೂ ಹೆಚ್ಚು ಮಂದಿಗೆ ಲಸಿಕೆ ಹಾಕಬೇಕು, ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕರೊನಾ ನಿಯಂತ್ರಣ ಸಂಬಂಧ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಮನೆ-ಮನೆ ಸರ್ವೆ ಕಾರ್ಯ ಕೈಗೊಂಡಿದ್ದು, ರೋಗ ಲಕ್ಷಣವಿರುವವರನ್ನು ಹತ್ತಿರದ ಆಸ್ಪತ್ರೆಗೆ ಕರೆ ತಂದು ಪರೀಕ್ಷೆ ನಡೆಸಬೇಕು ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ತಿಳಿಸಿದರು.

ಜಿಲ್ಲೆಯ ಆರೋಗ್ಯ ಇಲಾಖೆ ಸೇರಿ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕರೊನಾ ನಿಯಂತ್ರಣಕ್ಕೆ ಶ್ರಮಿಸಬೇಕು. ಕಟ್ಟುನಿಟ್ಟಾಗಿ ಸರ್ಕಾರದ ಸೋಂಕು ಮಾರ್ಗಸೂಚಿ ಪಾಲಿಸಿ ನಿಯಂತ್ರಣಕ್ಕೆ ಸಹಕರಿಸಬೇಕು, ಉಸಿರಾಟ ತೊಂದರೆ, ಜ್ವರ, ನೆಗಡಿ ಸೇರಿ ರೋಗ ಲಕ್ಷಣವಿರುವವರಿಗೆ ಔಷಧ ಅಂಗಡಿಯವರು ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ಬಾಬು, ನಗರ ಯೋಜನಾ ನಿರ್ದೇಶಕಿ ಶುಭಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಡಾ.ಕೇಶವರಾಜು, ಡಾ.ಮೋಹನ್‌ದಾಸ್, ಡಾ.ಚೇತನ್, ಡಾ.ಸನತ್ ಮತ್ತಿತರರು ಇದ್ದರು.

ಸೋಂಕಿಗೆ ಇಬ್ಬರು ಸಾವು : ಜಿಲ್ಲೆಯಲ್ಲಿ ಬುಧವಾರ 248 ಜನರಿಗೆ ಸೋಂಕು ದೃಢವಾಗಿದ್ದು, ಕೊರಟಗೆರೆಯಲ್ಲಿ 34 ವರ್ಷದ ಯುವಕ ಹಾಗೂ ಚಿಕ್ಕನಾಯಕನಹಳ್ಳಿ ಕಂದಿಕೆರೆಯಲ್ಲಿ 70 ವರ್ಷದ ವೃದ್ಧ ಕರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 14 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲೆಯೆಲ್ಲೆಡೆ ಜನರು ಭಯದಲ್ಲಿ ಬದುಕುವಂತಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 103 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು, ಈವರೆಗೆ 24,985 ಜನರು ಮಹಾಮಾರಿ ವಿರುದ್ಧ ಗೆದ್ದಿದ್ದಾರೆ. ಬುಧವಾರ ತುಮಕೂರು ತಾಲೂಕಿನಲ್ಲಿಯೇ 116 ಜನರಿಗೆ ಸೋಂಕು ದೃಢವಾಗಿದೆ, ಚಿಕ್ಕನಾಯಕನಹಳ್ಳಿ 4, ಗುಬ್ಬಿ 10, ಕೊರಟಗೆರೆ 13, ಕುಣಿಗಲ್ 24, ಮಧುಗಿರಿ 10, ಪಾವಗಡ 15, ಶಿರಾ 16, ತಿಪಟೂರು 31 ಹಾಗೂ ತುರುವೇಕೆರೆಯಲ್ಲಿ 9 ಒಟ್ಟು 248 ಜನರಿಗೆ ಸೋಂಕು ದೃಢವಾಗಿದೆ.