ಜಿಲ್ಲೆ

ಬಿಜೆಪಿ ಸದಸ್ಯತ್ವ ನೋಂದಣಿ ಹೆಚ್ಚು ಮಾಡಿಸಿ: ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ

ಮೈಸೂರು: ರೈತರು ನೆಮ್ಮದಿಯ ನಿಟ್ಟುಸಿರು ಬಿಡಬೇಕೆಂದರೆ ಸದಾ ರೈತರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿ ಇದ್ದಾಗ ಮಾತ್ರ ಸಾಧ್ಯ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮಾಂತರ ರೈತಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ, ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿ ಕೃಷಿ ಅನುದಾನಗಳು ನೇರ ರೈತರ ಖಾತೆಗೆ ಬರುವಂತೆ ಮಾಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ವಾರ್ಷಿಕ 6 ಸಾವಿರ ರೂ. ಅರ್ಹ ರೈತ ಫಲಾನುಭವಿಗಳಿಗೆ 3 ಕಂತುಗಳಲ್ಲಿ ನೀಡಲಾಗುತ್ತಿದೆ. ಅಲ್ಲದೆ ರಾಜ್ಯದಲ್ಲಿ ಯಡಿಯೂರಪ್ಪ ಸೇರಿದಂತೆ ಇತರರು 4 ಸಾವಿರ ರೂ. ನೀಡಿ ಒಟ್ಟು 10 ಸಾವಿರ ರೂ. ದೊರೆಯುವಂತೆ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು, ಸದಸ್ಯರು, ಜಿಲ್ಲೆ, ತಾಲೂಕು ಸೇರಿದಂತೆ ಗ್ರಾಮೀಣ ಭಾಗದಲ್ಲಿ ರೈತರ ಆಗುಹೋಗುಗಳನ್ನು ಗಮನಿಸಬೇಕು. ಕೇಂದ್ರದ ಯೋಜನೆಗಳ ಕುರಿತು ಅವರಿಗೆ ಮಾಹಿತಿ ನೀಡಬೇಕು, ಸಾಧ್ಯವಾದಷ್ಟು ರೈತರಿಗೆ ಕೇಂದ್ರದ ಅನುದಾನ, ಯೋಜನೆಗಳ ಕುರಿತು ಮಾಹಿತಿ ನೀಡಬೇಕು ಎಂದರು.
ರೈತ ಮೋರ್ಚಾ ಪದಾಧಿಕಾರಿಗಳು ನಿರೀಕ್ಷೆಗೂ ಮೀರಿ ನಮ್ಮ ಪಕ್ಷಕ್ಕೆ ಸದಸ್ಯತ್ವ ಮಾಡಿಸಬೇಕು. ಕಳೆದ ಬಾರಿಯ ನೋಂದಣಿಗಿಂತ ಹೆಚ್ಚಿನ ಸಂಖ್ಯೆ ನೀಡುವಲ್ಲಿ ರೈತ ಮೋರ್ಚಾ ಕೆಲಸ ಮಾಡಬೇಕು ಎಂದು ಕೋರಿದರು.
ಇತ್ತೀಚಿಗೆ ಕಾಂಗ್ರೆಸ್ ಸರ್ಕಾರ ಪ್ರತಿ ದಿನ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಬಿಟ್ಟಿ ಭಾಗ್ಯಗಳಿಗೆ ಬೇರೆ ಬೇರೆ ಇಲಾಖೆಯ ಹಣಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದರಿಂದ ಇಡೀ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಮುಡಾ ಹಗರಣವನ್ನು ಮುಚ್ಚಿ ಹಾಕಲು ಇಡೀ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮಂತ್ರಿಗಳು ಮುಖ್ಯಮಂತ್ರಿಗಳ ಬೆನ್ನಿಗೆ ನಿಂತಿದೆ. ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದುಸ್ಥಿತಿ ಆಗುವತ್ತ ತೆರಳುತ್ತಿದೆ ಎಂದು ಟೀಕಿಸಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ಎನ್‌ಡಿಎ ಸರ್ಕಾರ ರೈತರಿಗೆ ಹಲವು ಯೋಜನೆಗಳನ್ನು ನೀಡುವುದರ ಮೂಲಕ ದೇಶದ ಬೆನ್ನೆಲುಬಾದ ರೈತರು ನೆಮ್ಮದಿಯಿಂದ ಇರಬೇಕು ಎಂದು ಶ್ರಮಿಸುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲಿ ರೈತ ಬೆಳೆಯುವ ಕೃಷಿಗೆ ಕೇಂದ್ರದಿಂದ ಅನುದಾನಗಳು ದೊರೆಯುತ್ತಿದ್ದು, ಇದರಿಂದ ಮಾರುಕಟ್ಟೆಯಲ್ಲೂ ಸಹ ಉತ್ತಮ ಬೆಂಬಲ ಬೆಲೆ ದೊರೆಯುತ್ತಿದೆ. ಕೇಂದ್ರ ಸರ್ಕಾರ ನೀಡುವ ರೈತ ಪಿಂಚಣಿಯು ನೇರ ಅವರ ಖಾತೆಗೆ ಜಮಾವಣೆಯಾಗುತ್ತಿದ್ದು ಇಡೀ ದೇಶದ ರೈತರಿಗೆ ಇದೊಂದು ಸಂಜೀವಿನಿ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬಾಬು, ಮುಖಂಡರಾದ ಗಂಗಾಧರ್, ವೆಂಕಟೇಶ್, ವಿವಿಧ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.