ಜಿಲ್ಲೆ

ಅನ್ಯ ಭಾಷಾ ಪದ ಬಳಕೆಗೆ ತಪ್ಪುಗಾಣಿಕೆ ಸಮರ್ಪಣೆ

ವೀರೇಶ ಸೌದ್ರಿ

ಗೋಕರ್ಣ: ಶ್ರೀ ರಾಮಚಂದ್ರಾಪುರಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು 32ನೇ ಚಾತುರ್ಮಾಸ್ಯ ಪೂರ್ವ ನೀಡಿದ್ದ ಸಂದೇಶದಿಂದ ಪ್ರೇರಣೆಗೊಂಡ ವಿದ್ಯಾರ್ಥಿಯೊಬ್ಬ ಮಂಗಳವಾರ ಅಶೋಕೆಯಲ್ಲಿ ಭಂಡಾರಿ ಸಮಾಜದ ವತಿಯಿಂದ ನಡೆದ ಸ್ವರ್ಣಪಾದುಕೆ ಪೂಜೆಯಲ್ಲಿ ಕನ್ನಡ ಮಾತೃಭಾಷೆ ಮಾತನಾಡುವಾಗ ಇಂಗ್ಲಿಷ್ ಭಾಷಾಪದ ಪ್ರಯೋಗಕ್ಕಾಗಿ ತಪ್ಪುಗಾಣಿಕೆಯನ್ನು ಶ್ರೀಗಳ ಚರಣಕ್ಕೆ ಸಮರ್ಪಿಸಿದ ಅಪರೂಪದ ಘಟನೆ ನಡೆದಿದೆ.

ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿರುವ ಶ್ರೀಧರ ಮಂಜುನಾಥ ಭಂಡಾರಿ ಸ್ವಾತಂತ್ರಾೃ ನಂತರದಲ್ಲಿ ಮೊದಲ ಬಾರಿಗೆ ಭಾಷಾ ಕಾಣಿಕೆ ಸಲ್ಲಿಸಿ ದಾಖಲೆಗೆ ಕಾರಣನಾದ ವಿದ್ಯಾರ್ಥಿ.

ಚಾತುರ್ಮಾಸ್ಯ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸ್ವಭಾಷಾ ಕನ್ನಡದ ಮೇಲೆ ನಡೆಯುತ್ತಿರುವ ಅನ್ಯ ಭಾಷೆಗಳ ದಾಳಿಯನ್ನು ತಡೆಯಲೇಬೇಕಾದ ಅನಿವಾರ್ಯತೆ ವಿವರಿಸಿ ಸ್ವಭಾಷೆಯಲ್ಲಿ ಅನ್ಯ ಭಾಷಾಪದ ಮಿಶ್ರಣದಿಂದ ಉಂಟಾಗುತ್ತಿರುವ ಕನ್ನಡ ಮಾಲಿನ್ಯದ ಬಗ್ಗೆ ರಾಘವೇಶ್ವರ ಶ್ರೀಗಳು ಎಚ್ಚರಿಸಿದ್ದರು.

ಈ ವೇಳೆ ಸ್ವಾತಂತ್ರೃ ಪೂರ್ವದಲ್ಲಿ ಬಿಎಂಶ್ರೀ ಅವರು ಕನ್ನಡ ಉಳಿಸುವ ಪ್ರಯತ್ನವಾಗಿ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದ್ದ ಶ್ರೀಗಳು ನಾವು ಕನ್ನಡ ಮಾತಿನ ಮಧ್ಯೆ ಬಳಸುವ ಪ್ರತಿ ಅನ್ಯ ಭಾಷಾ ಇಂಗ್ಲಿಷ್ ಪದಕ್ಕೆ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ದಂಡ ರೂಪದಲ್ಲಿ ತೆಗೆದಿಟ್ಟು ಸಮರ್ಪಿಸಲು ಕರೆ ನೀಡಿದ್ದರು.

ಶ್ರೀಗಳ ಸ್ವಭಾಷಾ ಪೂರ್ವ ಸಂದೇಶವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದ ಶ್ರೀಧರ ಅದರಿಂದ ಪ್ರಭಾವಕ್ಕೊಳಗಾಗಿ ಶ್ರೀಗಳ ಆದೇಶವನ್ನು ಶಿರಸಾವಹಿಸಿ ಪ್ರತಿ ಇಂಗ್ಲಿಷ್ ಪದ ಬಳಕೆಗೆ ನಿರ್ದಿಷ್ಟ ತಪ್ಪುಗಾಣಿಕೆ ತೆಗೆದಿರಿಸಿ ಅವುಗಳನ್ನು ಮಂಗಳವಾರ ತಮ್ಮ ಸಮಾಜದ ವತಿಯಿಂದ ನಡೆದ ಪಾದುಕೆ ಪೂಜೆಯಲ್ಲಿ ಸಮರ್ಪಿಸುವ ಮೂಲಕ ಅಚ್ಚ ಕನ್ನಡದಲ್ಲಿ ಮಾತನಾಡುವ ವಸ್ತುತಃ ಪ್ರತಿಜ್ಞೆಗೆ ಆದರ್ಶವಾದರು. ಶ್ರೀಗಳಿಂದ ವಿಶೇಷ ಆಶೀರ್ವಾದ ಅನುಗ್ರಹ ಪಡೆದ ವಿದ್ಯಾರ್ಥಿಗೆ ಮತ್ತು ಸ್ವರ್ಣಪಾದುಕೆ ಪೂಜೆ ಸಲ್ಲಿಸಿದ ಭಂಡಾರಿ ಸಮಾಜದ ಎಲ್ಲ ಮನೆಗಳಿಗೆ ವಿತರಿಸಲು ಶ್ರೀಗಳು ಸಮಾಜ ಮುಖಂಡರಿಗೆ ಸಮಷ್ಟಿ ಮಂತ್ರಾಕ್ಷತೆಯಿತ್ತು ಆಶೀರ್ವಾದವಿತ್ತರು.

ಭಂಡಾರಿ ಸಮಾಜದ ಅಧ್ಯಕ್ಷ ಶಿವ ಭಂಡಾರಿ, ಉಪಾಧ್ಯಕ್ಷ ನಾರಾಯಣ ಎಸ್.ಭಂಡಾರಿ, ವಿನಾಯಕ ಎಂ.ಭಂಡಾರಿ, ಹರಿಹರ ಎಸ್. ಭಂಡಾರಿ, ರವಿ ಎಂ. ಭಂಡಾರಿ ಮುಂತಾದವರಿದ್ದರು.

ಸರ್ವ ಸಮಾಜದ ಸಂಯೋಜಕ ಕೆ.ಎನ್. ಹೆಗಡೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಾಪ್ಪು, ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ, ಶ್ರೀಮಠದ ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮತ್ತಿತರರಿದ್ದರು.