ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಸನ ಪ್ರದರ್ಶಿಸಿದರು.  
ಜಿಲ್ಲೆ

ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಿ; ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯುಷ್ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಹಯೋಗದಲ್ಲಿ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ದೈಹಿಕ, ಮಾನಸಿಕ ಸದೃಢತೆಗೆ ಯೋಗ ಸಹಕಾರಿ. ಜೀವನದಲ್ಲಿ ಪ್ರತಿನಿತ್ಯ ಯೋಗ ರೂಢಿಸಿಕೊಳ್ಳಬೇಕು. ನಿಯಮಿತ ಯೋಗ ಮಾಡುವುದರ ಮೂಲಕ ಆರೋಗ್ಯ ದೃಢತೆ ಹಾಗೂ ಚೈತನ್ಯಯುಕ್ತ ಬದುಕು ನಡೆಸಬಹುದಾಗಿದೆ. ಯೋಗ ರೂಢಿಸಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬಹುದು. ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ. ಜೂ.21 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದೇಶಗಳು ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಸಾಮೂಹಿಕ ಯೋಗಾಭ್ಯಾಸ

ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಯೋಗಾಸಕ್ತರಿಗೆ 45 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿಸಲಾಯಿತು. ಸುನೀತಾ ಬಿರಾದಾರ ಅವರು ಯೋಗಾಸನ ಹಾಗೂ ಚಂದ್ರಶೇಖರ ಮತ್ತು ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕಿ ಗೀತಾಂಜಲಿ ದಾಸರ್ ಅವರು ಪ್ರಾಣಾಯಾಮದ ಅಭ್ಯಾಸ ಮಾಡಿಸಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಋಷಿಕೇಶ್ ಸೋನಾವಣೆ, ಎಡಿಸಿ ಮಹಾದೇವ ಮುರಗಿ, ಎಎಸ್‌ಪಿ ಶಂಕರ ಮಾರಿಹಾಳ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ರಾಮನಗೌಡ ಎಸ್. ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲಿಕ ಮಾನವರ ಮತ್ತಿತರರಿದ್ದರು.

ಭಾರತಿ ಕುಂದನಗಾರ ತಂಡದಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು. ವೈದ್ಯಾಧಿಕಾರಿ ಡಾ. ವಿದ್ಯಾವತಿ ಎಂ.ಅಥಣಿ ಪ್ರಾರ್ಥನೆ ಗೀತೆ ಹಾಡಿದರು. ಡಾ. ಬಿ.ಎನ್. ವಗದರ್ಣಿ ಸ್ವಾಗತಿಸಿದರು. ಡಾ. ವಿಜಯ ಮಹಾಂತೇಶ ನಿರೂಪಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯ, ಕರ್ನಾಟಕ ರಿಸರ್ವ್ ಬಟಾಲಿಯನ್, ಸ್ಕೌಟ್ಸ್ ಹಾಗೂ ಗೈಡ್ಸ್, ವಿವಿಧ ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.