ಜಿಲ್ಲೆ

ಗಟಾರ ಕಾಮಗಾರಿ ಅಪೂರ್ಣ ‘ಅಪಾಯಕ್ಕೆ ಆಹ್ವಾನ’

ಸೋಮನಾಥ ರೆಡ್ಡಿ

ಶ್ರೀಧರ ಅಡಿ, ಗೋಕರ್ಣ

ದೊಡ್ಡ ಕಾಮಗಾರಿಗಳನ್ನು ಮುಗಿಸುವ ಭರದಲ್ಲಿ ಈ ಕಾಮಗಾರಿಗಳಿಗೆ ಸಂಬಂಧಿಸಿದ ಅನೇಕ ಚಿಕ್ಕಪುಟ್ಟ ಅಗತ್ಯ ಮೂಲಭೂತ ಕೆಲಸಗಳು ನಿರ್ಲಕ್ಷ್ಯಕ್ಕೊಳಗಾಗಿ ಹಾಗೇ ಉಳಿದು ಬಿಡುತ್ತವೆ. ಇಂತಹ ನಿರ್ಲಕ್ಷ್ಯ ಅಪಾಯಕ್ಕೆ ಆಹ್ವಾನ ನೀಡುತ್ತವೆ ಎನ್ನುವುದಕ್ಕೆ ಇಲ್ಲಿನ ಗಂಗಾವಳಿಯಲ್ಲಿ ನಿರ್ಮಿಸಲಾದ ಹೊಸ ಸೇತುವೆ ಉದಾಹರಣೆಯಾಗಿದೆ.

ಸೇತುವೆ ಕೆಲಸ ಮುಗಿದು ಬ್ರಿಜ್ ಮೇಲೆ ಸಂಚಾರ ಪ್ರಾರಂಭವಾಗಿ ಅನೇಕ ದಿನಗಳಾಗಿವೆ. ಆದರೆ, ಬ್ರಿಜ್ ಸಮೀಪದಲ್ಲಿ ಹಲವಾರು ದಿನಗಳ ಪ್ರಾರಂಭಿಸಲಾದ ಗಟಾರ ಕೆಲಸ ಮಾತ್ರ ಇನ್ನೂ ಮುಗಿದಿಲ್ಲ. ಈ ಗಟಾರಕ್ಕೆ ಹೊಂದಿಕೊಂಡು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಾರ್ಯನಿರ್ವಹಿಸುತ್ತಿದೆ. ಹೊಸ ಗಟಾರ ಕಟ್ಟಲು ಟ್ರಾನ್ಸ್‌ಫಾರ್ಮರ್‌ಗೆ ಹೊಂದಿಕೊಂಡು ದೊಡ್ಡ ಹೊಂಡ ತೆಗೆಯಲಾಗಿದೆ. ಉಸುಕಿನಿಂದ ಕೂಡಿದ ಈ ವಿದ್ಯುತ್ ವಾಹಕದ ತಳಭಾಗ ಭಾರಿ ಮಳೆಗೆ ಕುಸಿದು ನೆಲ ಸೇರಿದರೆ ಉಂಟಾಬಹುದಾದ ಅವಘಡವನ್ನು ಊಹಿಸಲೂ ಅಸಾಧ್ಯವಾಗಿದೆ. ಸೇತುವೆಗೆ ಹೋಗುವ ಮುಖ್ಯ ರಸ್ತೆಯ ಮೇಲೆ ಪ್ರವಾಸಿಗರು ಹಾಗೂ ಅವರ ವಾಹನಗಳು ಸಂಚರಿಸುತ್ತವೆ. ಈ ಟ್ರಾನ್ಸ್‌ಫಾರ್ಮರ್ ಸಮೀಪದ ರಸ್ತೆಯ ಮೇಲೆ ನಿತ್ಯ ನೂರಾರು ವಾಹನಗಳನ್ನು ನಿಲ್ಲಿಸಲಾಗುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಮಾಲೀಕರಿಗೆ ಆತಂಕ ಕಾಡುತ್ತಿದೆ. ಗ್ರಾಮಸ್ಥರ ದೂರಿನ ಮೇರೆಗೆ ಶುಕ್ರವಾರ ಸ್ಥಳೀಯ ಹೆಸ್ಕಾಂ ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್ ಸ್ಥಳ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ತಕ್ಷಣ ಅಗತ್ಯ ಕ್ರಮ ತೆಗೆದುಕೊಳ್ಳಲು ಹೆಸ್ಕಾಂ ತಾಲೂಕು ಕಚೇರಿಯಿಂದ ಗುತ್ತಿಗೆದಾರರಿಗೆ ಲಿಖಿತವಾಗಿ ಸೂಚಿಸಲಾಗಿದೆ.

ಸರ್ವಿಸ್ ರಸ್ತೆ ನಿರ್ಮಿಸಲು ಆಗ್ರಹ: ಎತ್ತರದಿಂದ ಗಂಗಾವಳಿ ನದಿಗೆ ಹೊಂದಿಕೊಂಡಿರುವ ಗ್ರಾಮದ ರಸ್ತೆಯನ್ನು ಬ್ರಿಜ್ ಎತ್ತರಕ್ಕೆ ತಕ್ಕುದಾಗಿ ಎತ್ತರಿಸಿ ಸರ್ವಿಸ್ ರಸ್ತೆ ನಿರ್ಮಿಸುವ ಬೇಡಿಕೆಯಿದೆ. ತಕ್ಷಣದಲ್ಲಿ ಸರ್ವಿಸ್ ರಸ್ತೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಅಂದಾಜು 150ರಿಂದ 200ಮೀ ಉದ್ದದ ವಸತಿ ಪ್ರದೇಶದ ಈ ರಸ್ತೆಗೆ ಮಣ್ಣು ಹಾಕಿ ಕನಿಷ್ಠ ನಾಲ್ಕು ಅಡಿ ಎತ್ತರಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಖ್ಯ ಹಳ್ಳದಲ್ಲಿ ಹೂಳು: ಸೇತುವೆ ಕಾಮಗಾರಿಯಿಂದ ನದಿಗೆ ಬಂದು ಸೇರುವ ಗ್ರಾಮದ ಮುಖ್ಯ ಹಳ್ಳ ಹೂಳಿನಿಂದ ತುಂಬಿಕೊಂಡಿದೆ. ಮಳೆಗಾಲ ಪ್ರಾರಂಭವಾಗುವುದರೊಳಗೆ ಹಳ್ಳವನ್ನು ಸ್ವಚ್ಛಗೊಳಿಸದೇ ಹೋದಲ್ಲಿ ಸಮಸ್ತ ಗ್ರಾಮ ಮತ್ತು ವಾಸದ ಮನೆಗಳು ಜಲಾವೃತವಾಗುವ ಸಂಕಷ್ಟ ಒದಗುವ ಲಕ್ಷಣಗಳಿವೆ.

ಬ್ರಿಜ್ ಕಾಮಗಾರಿಯಿಂದ ಗ್ರಾಮ ಮತ್ತು ಗ್ರಾಮಸ್ಥರಿಗೆ ಈ ಸಮಸ್ಯೆಗಳು ಎದುರಾಗಿವೆ. ಈ ಕುರಿತು ಸ್ಥಳೀಯ ಗ್ರಾಪಂ ವತಿಯಿಂದ ಕೂಡ ಈಗಾಗಲೇ ಮನವಿ ನೀಡಲಾಗಿದೆ. ಸೇತುವೆ ಕಾಮಗಾರಿ ನಿರ್ವಹಿಸಿದ ಕಂಪನಿಯವರು ಜವಾಬ್ದಾರಿ ನಿಭಾಯಿಸಿ ಸಂಭವನೀಯ ಅನಾಹುತ ತಪ್ಪಿಸಲು ಕೂಡಲೇ ತ್ವರಿತ ಕ್ರಮಕ್ಕೆ ಮುಂದಾಬೇಕು. ಚಂದ್ರಶೇಖರ ನಾಯ್ಕ, ನಾಡುಮಾಸ್ಕೇರಿ ಗ್ರಾಪಂ ಹಿರಿಯ ಸದಸ್ಯ