ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಸಾರ್ವಜನಿಕರಿಂದ ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ತಹಸೀಲ್ದಾರ್ ಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ ಸೇರಿ ಇತರೆ ಕೆಲ ಪ್ರಮಾಣ ಪತ್ರ ಪಡೆಯುವಲ್ಲಿ ವಿಳಂಬ ಮತ್ತು ಆಹಾರ ಇಲಾಖೆಯಲ್ಲಿ ಪಡಿತರ ಚೀಟಿಗಳ ದೂರು, ರಸ್ತೆ ಅತಿಕ್ರಮಣ ಸೇರಿ ಕೆಲ ದೂರುಗಳು ಸ್ವೀಕೃತವಾದವು.
ಪಟ್ಟಣದ ಮುಖ್ಯ ಬಜಾರ್ ರಸ್ತೆಯ ಅಕ್ಕಪಕ್ಕದ ವ್ಯಾಪಾರಸ್ಥರು ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ ವ್ಯಾಪಾರ-ವಹಿವಾಟು ರಸ್ತೆಯಲ್ಲಿಯೇ ನಡೆಯುತ್ತದೆ. ಹೀಗಾಗಿ ಸಂಚಾರ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸರ್ಕಾರಿ ಜಾಗ ಒತ್ತುವರಿಯಾಗಿರುವ ಬಗ್ಗೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹಾಗೂ ಪೋಲಿಸರಿಗೆ ಸೂಚಿಸಿದರು.
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸರ್ಕಾರಿ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಿಗೆ ಸರಿಯಾದ ಆಹಾರ, ನೀರು ಸೇರಿ ಎಲ್ಲ ಸೌಲಭ್ಯ ಪೂರೈಸಬೇಕು. ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಿ ಗುಣಮಟ್ಟ ಪರೀಕ್ಷಿಸಬೇಕು. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮೇಲಿಂದ ಮೇಲೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ವಾಸುದೇವ ಸ್ವಾಮಿ, ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ, ಆರೋಗ್ಯ, ಆಹಾರ, ಸಾರಿಗೆ, ಕೃಷಿ, ತೋಟಗಾರಿಕೆ, ಪೊಲೀಸ್, ಶಿಕ್ಷಣ, ಸಮಾಜ ಕಲ್ಯಾಣ, ಪುರಸಭೆ, ಹೆಸ್ಕಾಂ, ಖಜಾನೆ, ಉಪನೋಂದಣಾಧಿಕಾರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.