ಆನೇಕಲ್: ಬಿದರಗುಪ್ಪೆ ಗ್ರಾಪಂನ ಇಂಡ್ಲಬೆಲೆಯಲ್ಲಿ ನಕಲಿ ವ್ಯಕ್ತಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ತಹಸೀಲ್ದಾರರಿಗೆ ಈ ಬಗ್ಗೆ ಹಲವು ಬಾರಿತಿಳಿಸಿದರೂ ಕ್ರಮಕೈಗೊಂಡಿಲ್ಲ. ಹಾಗಾಗಿ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಏಕೆ ಎಂದು ಪ್ರಶ್ನಿಸಿ, ತಹಸೀಲ್ದಾರ್ ಮಹದೇವಯ್ಯ ವಿರುದ್ಧ ಪ್ರತಿಭಟನಾಕಾರರು ೋಷಣೆ ಕೂಗಿದರು.
ಬಿಜೆಪಿಯ ಕೆಲ ಮುಖಂಡರು ನಕಲಿ ವ್ಯಕ್ತಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಕಚೇರಿಗೆ ಬಂದು ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಚುನಾವಣೆ ನಡೆಯುವ ದಿನದಂದು ಮತದಾರರ ಪಟ್ಟಿ ನೀಡಿದರೆ ಚುನಾವಣೆ ನಡೆಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಬಿದರಗುಪ್ಪೆ ಶಂಕರ್ ರೆಡ್ಡಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಅತ್ತಿಬೆಲೆ ವೇಣು ಮಾತನಾಡಿ, ಮತದಾರರ ಪಟ್ಟಿಯಲ್ಲಿರುವ ನಕಲಿ ವ್ಯಕ್ತಿಗಳ ಹೆಸರು ತೆಗೆಯದಿದ್ದರೆ ಮತದಾನ ಬಹಿಷ್ಕರಿಸುತ್ತೇವೆ. ಬಿದರಗುಪ್ಪೆ ಗ್ರಾಪಂನ ವಾರ್ಡ್ 2ರ ಇಂಡ್ಲಬೆಲೆಯಲ್ಲಿ ಮುನ್ನೂರಕ್ಕೂ ಹೆಚ್ಚು ನಕಲಿ ಮತದಾರರ ಸೇರ್ಪಡೆ ಮಾಡಲಾಗಿದೆ ಎಂದು ದೂರಿದರು.
ಬಿಜೆಪಿ ಬೆಂಬಲಿತರ ಗೆಲುವಿಗಾಗಿ ಅಕ್ರಮಕ್ಕೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಚಲವಾದಿ ನಾಗರಾಜ ಮಾತನಾಡಿ, ಬಿಜೆಪಿ ಮುಖಂಡರಿಗೆ 15 ದಿನದ ಹಿಂದೆ ಮತದಾರರ ಪಟ್ಟಿ ನೀಡಲಾಗಿದೆ. ಕಾಂಗ್ರೆಸ್ ಬೆಂಬಲಿತರಿಗೆ ಶನಿವಾರವಾದರೂ ಮತದಾರರ ಪಟ್ಟಿ ನೀಡಿಲ್ಲ. ಈ ತಾರತಮ್ಯದ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ತಹಸೀಲ್ದಾರರು ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಎರಡು ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಲಾಯಿತು. ಆದರೆ ಚುನಾವಣೆ ಸಿದ್ಧತೆಯಲ್ಲಿ ತೊಡಗಿದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವ ಜತೆಗೆ ಜಿಲ್ಲಾಧಿಕಾರಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ಹೋರಾಟಗಾರರು ತಿಳಿಸಿದರು.
ಗ್ರಾಮಸ್ಥರಾದ ವಿಮಲನ್, ಅತ್ತಿಬೆಲೆ ವೆಂಕಟೇಶ್, ಪಿಲ್ಲಪ್ಪ, ವಾಸು, ರಘು, ಶ್ರೀನಿವಾಸ್, ಮುನಿರಾಜು, ಕೆ.ನಾಗರಾಜು, ಕೆ.ನಾಗರಾಜು ಮತ್ತಿತರರು ಹಾಜರಿದ್ದರು.