ಹೊರ್ತಿ: ಈಗಲೂ ನಾನು, ನನ್ನ ಪತ್ನಿ ಮನೆ, ಮಠಗಳಲ್ಲಿ ಕಸಗೂಡಿಸುತ್ತೇವೆ. ಅಹಂಕಾರ ಬಿಟ್ಟಾಗ ಮಾತ್ರ ಆತ್ಮ ಸಾಕ್ಷಾತ್ಕಾರವಾಗಲಿದೆ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು.
ಸಮೀಪದ ಇಂಚಗೇರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅತಿಯಾದ ಮೊಬೈಲ್ ಬಳಕೆಯಿಂದ ಓದುವ ಹವ್ಯಾಸ ಕಡಿಮೆಯಾಗಿದೆ. ಓದುವ ರೂಢಿ ಬೆಳೆಸಿಕೊಂಡರೆ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಈಗಲೂ ನನ್ನ ಮನೆಯಲ್ಲಿ ಅಪಾರ ಪುಸ್ತಕಗಳಿದ್ದು, ನಾವಿಬ್ಬರೂ ಪುಸ್ತಕ ಓದುತ್ತೇವೆ. ಮುಂದೊಮ್ಮೆ ನಮ್ಮಲ್ಲೇ ಇನ್ನೊಬ್ಬರು ಪುಸ್ತಕ ಓದುವ ವ್ಯಕ್ತಿ ಬರಬಹುದು ಎಂದು ಹೇಳಿದರು.
ಸ್ವಾತಂತ್ರೃ ಸೇನಾನಿ ಮುರುಗೋಡ ಮಹಾದೇವರು, ಭಾವೂಸಾಹೇಬರು, ಗಿರಮಲ್ಲೇಶ್ವರ ಮಹಾರಾಜರ ದೇವಸ್ಥಾನಗಳ ಗದ್ದುಗೆಗಳ ದರ್ಶನ ಪಡೆದರು.
ಶ್ರೀಮಠದ ಪೀಠಾಧಿಪತಿ ರೇವಣಸಿದ್ಧೇಶ್ವರ ಮಹಾರಾಜರನ್ನು ದೊಡ್ಡಣ್ಣ ಸನ್ಮಾನಿಸಿದರು. ರೇವಣಸಿದ್ಧೇಶ್ವರ ಶ್ರೀಗಳು ದೊಡ್ಡಣ್ಣ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ನಿರ್ಮಾಪಕ ಮಾಧವಾನಂದ ಶೇಗುಣಸಿ, ನಟ, ನಿರ್ದೇಶಕ ವಿಶ್ವಪ್ರಕಾಶ ಮಲಗೊಂಡ, ಮಲ್ಲಿಕಾರ್ಜುನ ಕಾಲತಿಪ್ಪಿ, ಪ್ರಕಾಶ ಕಾಲತಿಪ್ಪಿ ಇತರರಿದ್ದರು.