ವಿಜಯವಾಣಿ ಸುದ್ದಿಜಾಲ ಧಾರವಾಡ
ಧರ್ಮಸ್ಥಳದ ಧರ್ಮಾಽಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು 1973ರಲ್ಲಿ ಧಾರವಾಡದ ಜನತಾ ಶಿಕ್ಷಣ ಸಮಿತಿಯನ್ನು ವಹಿಸಿಕೊಂಡಾಗ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿತ್ತು. ಧರ್ಮಸ್ಥಳದಿಂದ ಧಾರವಾಡಕ್ಕೆ ಆಗಮಿಸಿ ಸಂಸ್ಥೆಗಳನ್ನು ನಿರ್ವಹಿಸುವುದು ಸವಾಲಿನ ಕಾರ್ಯವಾಗಿತ್ತು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಿದ್ದು ಇತಿಹಾಸ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಆಡಳಿತ ಮಂಡಳಿಯ 52ನೇ ವರ್ಷದ ಪಾದಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಕ್ಕೇರಿಕರ ರಾಮರಾಯರಿಂದ 1944ರಲ್ಲಿ ಸ್ಥಾಪಿತವಾದ ಸಂಸ್ಥೆಯನ್ನು ನೂತನ ಆಡಳಿತ ಮಂಡಳಿ ವಹಿಸಿಕೊಂಡು 52ನೇ ವಷÀðಗಳಾಗಿವೆ. ಜೆಎಸ್‌ಎಸ್ ಅಡಿಯಲ್ಲಿ ಇಂದು 25 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, 22,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 1,300 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ ಶೈಕ್ಷಣಿಕ ಕಾಶಿ ಎಂಬ ಹೆಸರು ಬರುವಲ್ಲಿ ವೀರೇಂದ್ರ ಹೆಗ್ಗಡೆಯವರದು ಸಿಂಹಪಾಲು ಎಂದರು.
ಮಹಾವೀರ ಉಪಾದ್ಯೆ ನಿರೂಪಿಸಿದರು. ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಸೂರಜ್ ಜೈನ್, ಡಾ. ಜಿನದತ್ತ ಹಡಗಲಿ ಹಾಗೂ ಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಇದ್ದರು.