ಧಾರವಾಡ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಥಾಪಿಸಿರುವ ಮತದಾನ ಪ್ರಾತ್ಯಕ್ಷಿಕ ಕೇಂದ್ರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಶುಕ್ರವಾರ ಉದ್ಘಾಟಿಸಿದರು.
ಮತದಾರರಿಗೆ ವಿದ್ಯುನ್ಮಾನ ಮತ ಯಂತ್ರಗಳ ಹಾಗೂ ಮತದಾನ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ ಕಚೇರಿ, ಉಪ ವಿಭಾಗಾಕಾರಿಗಳ ಕಚೇರಿ ಹಾಗೂ ಪಾಲಿಕೆ ಆವರಣದಲ್ಲಿ ಮತದಾನ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇವಿಎಂಗಳು ಸತ್ಯದ ಕನ್ನಡಿ ಇದ್ದಂತೆ. ಅವುಗಳನ್ನು ತಿರುಚಲು ಸಾಧ್ಯವಿಲ್ಲ. ಮತದಾರರು ತಾವು ಹಾಕಿದ ಮತವನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆ. ಜಿಲ್ಲೆಯ 1652 ಮತದಾನ ಕೇಂದ್ರಗಳಲ್ಲಿ 142 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿ ಅವರಿಂದ ಇವಿಎಂ ಪ್ರಾತ್ಯಕ್ಷಿಕೆ ಮಾಡಲಾಗುವುದು. ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ವಾಹನ ಮುಖಾಂತರ ಪ್ರಾತ್ಯಕ್ಷಿಕೆ ಹಾಗೂ ಅರಿವು ಮೂಡಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹಾಗೂ ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.