ಕಾಮಗಾರಿ ಪೂರ್ಣಗೊಂಡ ವಿರಾಜಪೇಟೆ-ಸಿದ್ದಾಪುರ ರಸ್ತೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಸೋಮವಾರ ಉದ್ಘಾಟಿಸಿದರು. ರಂಜಿಪೂಣಚ್ಚ, ದಿವಾಕರ್, ಗೋಪಾಲಕೃಷ್ಣ, ಹನೀ, ಸಯ್ಯದ್ ಬಾವ, ಉಮ್ಮರ್, ಸಬ್ಬೀರ್, ಮುತ್ತಣ್ಣ ಇದ್ದರು. 
ಜಿಲ್ಲೆ

ಶಾಸಕರಿಂದ ವಿರಾಜಪೇಟೆ ಸಿದ್ದಾಪುರ ರಸ್ತೆ ಉದ್ಘಾಟನೆ

ಎಂ.ರವಿ

ಸಿದ್ದಾಪುರ: ಹಲವು ವರ್ಷಗಳಿಂದ ದುರಸ್ತಿ ಕಾಣದೆ ಗುಂಡಿಮಯವಾಗಿದ್ದ ವಿರಾಜಪೇಟೆ-ಸಿದ್ದಾಪುರ ರಸ್ತೆ ಕಾಮಗಾರಿ ಮುಗಿದಿದ್ದು ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸೋಮವಾರ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.

ಕಳೆದ ಅಕ್ಟೋಬರ್ 27 ರಂದು 1070 ಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದ ಶಾಸಕರು ಶೀಘ್ರವೇ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು. ಅಲ್ಲದೆ ತಾವೇ ಖುದ್ದಾಗಿ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಇದರಿಂದ ತ್ವರಿತವಾಗಿ ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡಲಾಗಿ, ಅದನ್ನು ಉದ್ಘಾಟಿಸಲಾಗಿದೆ.

ಇಂಜಿಲಗೆರೆ, ಆನಂದಪುರ, ಸಿದ್ದಾಪುರ ಭಾಗದಲ್ಲಿ ವನ್ಯಪ್ರಾಣಿಗಳ ಉಪಟಳ ಮಿತಿ ಮೀರಿದ್ದು ಬಾಡಿಗೆ ವಾಹನಗಳು ಬರಲು ನಿರಾಕರಿಸುತ್ತಿದ್ದರು. ಕಾರ್ಮಿಕರೆ ಹೆಚ್ಚಾಗಿರುವ ಈ ಭಾಗದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಹಿಂದೆ ರಸ್ತೆ ದುರಸ್ತಿ ಪಡಿಸುವಂತೆ ಹಲವು ಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರು ಈ ಬಗ್ಗೆ ಪೊನ್ನಣ್ಣಅವರಿಗೆ ಮನವಿ ಸಲ್ಲಿಸಿದ್ದರು.

ನಾನು ಶಾಸಕನಾಗಿ ಆಯ್ಕೆಯಾದರೆ ರಸ್ತೆಯನ್ನು ಅಭಿವೃದ್ಧಿ ಪಡಿಸುವುದಗಿ ಪೊನ್ನಣ್ಣ ಭರವಸೆ ನೀಡಿದ್ದರು. ಅದರಂತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಿದ್ದು ಶಾಸಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿಪೂಣಚ್ಚ, ವಲಯಕ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಪ್ರದೇಶ ಕಾಂಗ್ರೆಸ್ ಕಿಸಾನ್ ಸಭಾ ರಾಜ್ಯ ಸದಸ್ಯ ಗೋಪಾಲಕೃಷ್ಣ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀ, ಉಪಾಧ್ಯಕ್ಷ ಸಯ್ಯದ್ ಬಾವ, ಕಾಂಗ್ರೆಸ್ ಕಾರ್ಯಕರ್ತರಾದ ಉಮ್ಮರ್, ಸಬ್ಬೀರ್, ಸೆಸ್ಕ್‌ನ ಮುತ್ತಣ್ಣ ಮೊದಲಾದವರು ಹಾಜರಿದ್ದರು.