ವಿಜಯವಾಣಿ ಸುದ್ದಿಜಾಲ ಉಡುಪಿ
ಲೌಕಿಕ ವಿದ್ಯೆ ಎನ್ನುವುದು ಹೊಟ್ಟೆಪಾಡಿಗಾಗಿ ಕಲಿಯುವುದಾಗಿದೆ. ಆದರೆ, ಅಧ್ಯಾತ್ಮ ವಿದ್ಯೆಯು ಮರಣಾನಂತರವೂ ಪುಣ್ಯರೂಪವಾಗಿ ಬಂದು ನಮ್ಮನ್ನು ದೇವರೆಡೆಗೆ ತಲುಪಿಸಲು ಸಾಧನವಾಗುತ್ತದೆ. ಎಳವೆಯಲ್ಲಿ ಕಲಿತದ್ದು ಎಂದೂ ಮರೆಯುವುದಿಲ್ಲ. ಹಾಗಾಗಿ ಮಕ್ಕಳನ್ನು ಲೌಕಿಕ ವಿದ್ಯೆಗೆ ಸೀಮಿತ ಮಾಡದೆ ಸಂಸ್ಕೃತಿ-ಸಂಸ್ಕಾರದ ಪ್ರಭಾವಕ್ಕೆ ಒಳಗಾಗುವಂತಹ ವಿದ್ಯೆಯಲ್ಲಿ ತೊಡಗುವಂತೆ ಮಾಡುವುದು ಪಾಲಕರ ಕರ್ತವ್ಯ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಸಾನ್ನಿಧ್ಯ ವಹಿಸಿದ್ದ ಪುತ್ತಿಗೆ ಮಠದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಶಿಬಿರದಲ್ಲಿ ಪಾಲ್ಗೊಂಡಿದ್ದ ಚಿಣ್ಣರಿಗೆ ಹಿತವಚನ ನುಡಿದರು.
ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ವಿದ್ವಾನ್ ಮಹಿತೋಷ ಆಚಾರ್ಯ ಸ್ವಾಗತಿಸಿದರು. ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಮಠದ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ವಂದಿಸಿದರು.
ಮಕ್ಕಳಲ್ಲಿ ಧಾರ್ಮಿಕ ಶಕ್ತಿ ಹಾಗೂ ಪ್ರಜ್ಞೆ ಮೂಡುವಂತಾಗಲು ಈ ಶಿಬಿರದಲ್ಲಿ ಸಂಧ್ಯಾವಂದನೆ, ದೇವರ ಪೂಜಾ ವಿಧಾನ, ಸೂಕ್ತ ಪಾಠ, ಬಾಲಕಿಯರಿಗೆ ದಾಸರ ಪದ, ಹೂ ಕಟ್ಟುವುದು, ಬತ್ತಿ ಹೊಸೆಯುವುದು, ಸ್ತೋತ್ರ ಪಠಣೆ ಸೇರಿದಂತೆ ಅನೇಕ ಬಗೆಯ ಸಂಸ್ಕಾರವನ್ನು ಶ್ರೀಕೃಷ್ಣನ ಸನ್ನಿಧಿಯಲ್ಲಿ ಕಲಿಸಲಾಗುವುದು. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ