ಬೆಳಗಾವಿ: ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನೂತನವಾಗಿ ಆರಂಭಿಸಿರುವ ‘ರಾಮಾಂಜನೇಯ ಎಕ್ಸಿಕ್ಯೂಟಿವ್ ಹೋಟೆಲ್ ಮತ್ತು ಉಡುಪಿ ಆಯೋಧ್ಯಾ ಫುಡ್ ಪಾಲೇಜ್‌ನ ಉದ್ಘಾಟನೆ ಕಾರ್ಯಕ್ರಮ ಇದೇ ನ.30ರಂದು ನಡೆಯಲಿದೆ ಎಂದು ಹೋಟೆಲ್ ಮಾಲೀಕರಲ್ಲಿ ಒಬ್ಬರಾದ ಪ್ರಭಾಕರ ಶೆಟ್ಟಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ ನಾಗರಕಟ್ಟೆ ಅತಿಥಿಗಳಾಗಿ ಆಗಮಿಸುವರು. ಟ್ರಸ್ಟ್ ಸದಸ್ಯ ಅಮಿತ್ ಮಿಶ್ರಾ, ಮೌಂಟ್ ಏವರೇಸ್ಟ್ ಏರಿದ ಪ್ರಥಮ ಮಹಿಳೆ ಅರುನಿಮಾ ಸಿನ್ಹಾ, ಬಂಟರ ಸಂಘದ ಅಧ್ಯಕ್ಷ ವಿಠಲ ಹೆಗಡೆ, ಗೋಪಾಲ ಶೆಟ್ಟಿ, ವಿಜಯ ಶೆಟ್ಟಿ ಸೇರಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ಬಾಲ ಮೂರ್ತಿ ಲೋಕಾರ್ಪಣೆಗೊಂಡ ಬಳಿಕ ಇಲ್ಲಿನ ಹೋಟೆಲ್, ವಸತಿ ಗೃಹಗಳ ದರಗಳು ಗಗನಕ್ಕೇರಿವೆ. ಆದರೆ, ನಾವು ಆರಂಭಿಸುತ್ತಿರುವ ಹೋಟೆಲ್ ಮತ್ತು ವಸತಿ ಗೃಹದಲ್ಲಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಅಲ್ಲದೇ ಇಡೀ ಹೋಟೆಲ್ ಕನ್ನಡಮಯ ಆಗಿರಲಿದ್ದು, ಕೆಲಸಕ್ಕೆ ಕನ್ನಡಿಗರಿಗೆ ಆಧ್ಯತೆ ನೀಡಲಾಗುವುದು. ಒಟ್ಟಾರೆ ಕರ್ನಾಟಕದಿಂದ ಬರುವ ಭಕ್ತರಿಗೆ ವಿಶೇಷ ಆದರಾತಿಥ್ಯ ನೀಡಲಾಗುವುದು ಎಂದರು.
ಮತ್ತೋರ್ವ ಮಾಲೀಕ ಯತಿರಾಜ ಶೆಟ್ಟಿ, ಜಯರಾಮ ಶೆಟ್ಟಿ, ಸುರೇಶ ಶೆಟ್ಟಿ, ಆರ್. ಅಭಿಲಾಷ ಸುದ್ದಿಗೋಷ್ಠಿಯಲ್ಲಿದ್ದರು.