ಜಿಲ್ಲೆ

ಮೊಬೈಲ್​ ಬಿಟ್ಟು ಹಾಡಲು ಬಂದದ್ದು ಪ್ರಶಂಸನೀಯ...

ವಕೀಲ ಶಾಂತಾರಾಮ ಶೆಟ್ಟಿ ಸಂತಸ

ತುಳು ಭಾವಗೀತೆ ಸ್ಫರ್ಧೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಮುಳುಗಿರುವಾಗ, ಒಂದು ಕ್ಷಣವೂ ಮೊಬೈಲ್​ ಬಿಟ್ಟಿರಲಾಗದ ಈ ಯುಗದಲ್ಲೂ ತುಳು ಭಾವಗೀತೆ ಹಾಡಲು ಬಂದಿರುವ ಯುವ ಜನತೆಯ ಆಸಕ್ತಿ ಪ್ರಶಂಸನೀಯ. ಕನ್ನಡದಲ್ಲಿ ಅನೇಕ ಕವಿಗಳು ಅತ್ಯದ್ಭುತ ಭಾವಗೀತೆ ರಚಿಸಿದ್ದು, ಇದೀಗ ತುಳುವಿನಲ್ಲೂ ಸಹ ಒಳ್ಳೆಯ ಭಾವಗೀತೆ ರಚನೆ ಆಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹಿರಿಯ ವಕೀಲ ಶಾಂತಾರಾಮ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.

ಉಡುಪಿಯ ಕ್ರಿಶ್ಚಿಯನ್​ ಹೈಸ್ಕೂಲ್​ನಲ್ಲಿ ತುಳುಕೂಟ ಉಡುಪಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ದಿ. ಸಂಜೀವ್​ ಭಂಡಾರಿ ನಿಟ್ಟೂರು ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ತುಳು ಭಾವಗೀತೆ ಸ್ಫರ್ಧೆ ಉದ್ಘಾಟಿಸಿ ಮಾತನಾಡಿದರು.

ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಮಾಜಿ ಅಧ್ಯೆ ವೀಣಾ ಶೆಟ್ಟಿ, ತುಳುಕೂಟದ ಉಪಾಧ್ಯಕ್ಷ ಭುವನಪ್ರಸಾದ್​ ಹೆಗ್ಡೆ, ಖಜಾಂಚಿ ಚೈತನ್ಯ ಎಂ.ಜಿ., ಕರ್ನಾಟಕ ಸಂಘದ ಅಧ್ಯಕ್ಷ ಡಾ. ಭರತ್​ಕುಮಾರ್​ ಪೊಳಿಪು ಉಪಸ್ಥಿತರಿದ್ದರು.

ಡಾ. ಗಣೇಶ್​ ಗಂಗೊಳ್ಳಿಗೆ ಸನ್ಮಾನ

 ತುಳು ಭಾವಗೀತೆ ಸ್ಫರ್ಧೆ ಕಾರ್ಯಕ್ರಮದಲ್ಲಿ ಡಾ. ಗಣೇಶ್​ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಕೋಗಿಲೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಡಾ. ಗಣೇಶ್​ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಹಾಡಿನ ಮೂಲಕ ತುಳು ಭಾವಗೀತೆ ಸ್ಫರ್ಧೆಗೆ ಅವರು ಶುಭ ಕೋರಿದರು. 1ರಿಂದ 5ನೇ ತರಗತಿ, 6ರಿಂದ 10ನೇ ತರಗತಿ, ಕಾಲೇಜು ವಿದ್ಯಾರ್ಥಿ ಮತ್ತು ಸಾರ್ವಜನಿಕ ಎಂದು ನಾಲ್ಕು ವಿಭಾಗದಲ್ಲಿ ಸ್ಫರ್ಧೆ ಆಯೋಜಿಸಲಾಗಿತ್ತು. 200ಕ್ಕೂ ಅಧಿಕ ಸ್ಫರ್ಧಿಗಳು ಪಾಲ್ಗೊಂಡಿದ್ದರು.

ತುಳು ಭಾವಗೀತೆ ಸ್ಫರ್ಧೆಯ ಸಂಚಾಲಕ ಜಯರಾಂ ಶೆಟ್ಟಿಗಾರ್​ ಮಣಿಪಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧೆಯ ಉದ್ದೇಶ ವಿವರಿಸಿದರು. ಯುವ ಸಮುದಾಯಕ್ಕೆ ತುಳು ಸಾಹಿತ್ಯದತ್ತ ಒಲವು ಮೂಡಿಸಲು, ತುಳು ಸಂಸ್ಕೃತಿಯನ್ನು ರಕ್ಷಿಸಲು ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು. ಪ್ರಕಾಶ್​ ಸುವರ್ಣ ಕಟಪಾಡಿ ಸ್ವಾಗತಿಸಿದರು. ತುಳು ಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್​ ಕಿದಿಯೂರು ವಂದಿಸಿದರು. ಯಶೋದಾ ಕೇಶವ್​ ಕಾರ್ಯಕ್ರಮ ನಿರೂಪಿಸಿದರು.

ಶಾಲೆಯಲ್ಲಿ ಅಥವಾ ಇತರ ಸ್ಥಳಗಳಲ್ಲಿ ಯಾವುದೇ ಭಾಷೆ ಮಾತನಾಡಿ. ಆದರೆ, ಇಲ್ಲಿನ ಮೂಲನಿವಾಸಿಗರು ತಮ್ಮ ಮನೆಗಳಲ್ಲಿ ತುಳು ಭಾಷೆಯನ್ನೇ ಮಾತನಾಡಬೇಕು. ಅದರಿಂದ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಸಹಕಾರಿಯಾಗುತ್ತದೆ. | ಜಯಕರ್​ ಶೆಟ್ಟಿ ಇಂದ್ರಾಳಿ. ಅಧ್ಯಕ್ಷ, ತುಳುಕೂಟ (ರಿ.) ಉಡುಪಿ